Sunday, January 3, 2016

ಹೊಸವರುಷದ ಕನವರಿಕೆಗಳು

ಮೊನ್ನೆ ಹೊಸ ವರುಷ ಶುರುವಾದದ್ದು ಎಲ್ಲರಿಗೂ ಗೊತ್ತೇ ಇದೆ. ಮಾಸ್ಕೋನಲ್ಲಿ ಹೊಸ ವರುಷ ಅಂದ್ರೆ ಸಿಕ್ಕಾಪಟ್ಟೆ ಹುರುಪು. ಡಿಸೆಂಬರ್ ಕೊನೇ ವಾರದಿಂದಲೇ ತಯಾರಿಗಳು ಶುರುವಾಗಿ ಬಿಡ್ತಾವೆ. ಈ ಸಲವೂ ಭರ್ಜರಿ ತಯಾರಿ ನಡೆದಿತ್ತು. ಕಳೆದ ಬಾರಿ ಹ್ಯಾಗೋ ಮಾಡಿ ಡಿಸೆಂಬರ್ ೩೧ರ ರಾತ್ರಿ ನೆಮ್ಮದಿಯಾಗಿ ಮನೇಲಿ ನಿದ್ದೆ ಮಾಡಿದ್ದೆ. ಆದರೆ ಈ ಬಾರಿ ನನ್ನ ನಿದ್ದೆಗೆ ಸಂಚಕಾರ ಹಾಕಲೆಂದೇ ನನ್ ಸಹೋದ್ಯೋಗಿ ಬಾಸ್ ಡಿಸೆಂಬರ್ ಮೊದಲ್ನೇ ವಾರದಿಂದಲೇ ನಾನು ಈ ಬಾರಿ ಆತನ ಮನೆಗೆ ಹೋಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ವರಾತ ತೆಗೆದುಬಿಟ್ಟಿದ್ದ. ನನಗೋ ಇದೆಲ್ಲ ಸುತಾರಾಂ ಇಷ್ಟವಿರಲಿಲ್ಲ, ಮೇಲಾಗಿ ನಾನು ಅರಸಿಕ, ಅಲ್ಕೋಹಾಲು-ಮಾಂಸ ಎರಡೂ ಮುಟ್ಟಲ್ಲ!! ಈ ಎರಡೂ ಇಲ್ಲದೆ ಯಾವ ರಷ್ಯನ್ ಕೂಡ ಜೀವಿಸಲಾರ. ಅಲ್ಲಿಗೆ ಹೋದಲ್ಲಿ ನನ್ನ ಮೂರು ಹೊತ್ತಿನ ಊಟ ನಾಸ್ತಿ ಎಂದು ತಿಳಿದೇ ನಾನು ಬರಲಾರೆ ಎಂದು ಅವನಿಗೆ ಹೇಳಿದ್ದೆ. ಹ್ಯಾಗಾದರೂ ಮಾಡಿ ತಪ್ಪಿಸಿಕೊಳ್ಳುವ ಎಂದು ಹೊಂಚು ಹಾಕಿದ್ದೆ. ಕೊನೆಗೆ ಅವನ ಅಳುಮೋರೆಯನ್ನು ನೋಡಲಾರದೆ ಒಲ್ಲದ ಮನಸ್ಸಿನಿಂದೆ ಒಪ್ಪಿಕೊಂಡೆ.

೩೧ ಬಂದೇ ಬಿಟ್ಟಿತ್ತು, ಇವನ ಫೋನ್ ಕರೆಗಳು ಬೆಳಗಾಗುವುದರೊಡನೆಯೇ ಶುರುವಾಗಿದ್ದವು. ಅಂತೂ ಇಂತೂ ಮಧ್ಯಾನ್ಹದ ಹೊತ್ತಿಗೆ ಮನೆ ಸೇರಿಯಾಗಿತ್ತು. ಅವನ ಪಾನ ಗೋಷ್ಠಿ ಆಗಾಗಲೇ ಚಾಲನೆಯಾಗಿತ್ತು. ಅಡುಗೆಮನೆಯಲ್ಲಿ ಅದೆಂತದೋ ಭಕ್ಷ್ಯಗಳ ತಯಾರಿ ನಡೆದಿತ್ತು. ಸರಿ ನಾನೇನು ಮಾಡುವುದು?? ಹ್ಯಾಗಿದ್ದರೂ ಇಂಟರ್ನೆಟ್ ಇತ್ತಲ್ಲ. ಯು-ಟ್ಯೂಬ್ ನಲ್ಲಿ ಅದೂ ಇದೂ ನೋಡಲು ಶುರು ಮಾಡಿದೆ. ಅದನ್ನೂ ಎಷ್ಟು ಹೊತ್ತು ಅಂತ ಮಾಡುವುದು. ಹೊಟ್ಟೆ ಚುರುಗುಟ್ಟುತ್ತಿತ್ತು, ಏನು ಮಾಡೋದು? ನಾನು ತಿನ್ನೋಅಂತಹ ಯಾವುದೇ ತಿನಿಸು ಅಲ್ಲಿ ಕಾಣಲಿಲ್ಲ. ಕೊನೆಗೆ ಒಂದಿಷ್ಟು ಹಣ್ಣಿನ ರಸ ಕುಡಿದು ಮತ್ತೆ ಕಂಪ್ಯೂಟರ್ ನ ಮೊರೆ ಹೊಕ್ಕೆ. ನಡುನಡುವೆ ಆ ನನ್ನ ಬಾಸ್'ನ ಹೊಸ ವರುಷಕ್ಕೆ ಸಂಬಂದಿಸಿದ ಬಗ್ಗೆ ಹುರುಕು-ಮುರುಕು ಆಂಗ್ಲದಲ್ಲಿ ವಿವರಣೆಗಳು ನುಸುಳುತ್ತಿದ್ದವು. ನಾನು ಅವಕ್ಕೆ ತೆಲೆಯಾಡಿಸುವುದು ಅವನು ಮತ್ತೇನೋ ಹೇಳುವುದು ಹೀಗೆ ನಡೆದಿತ್ತು. ಹಾಗೆಯೇ ಮಾತನಾಡುತ್ತ ಒಂದಿಷ್ಟೇನನ್ನೂ ತಿಂದು ಮಲಗೇ ಬಿಟ್ಟ ಆಸಾಮಿ. ನನ್ನ ಹೊಟ್ಟೆ ಕೇಳಬೇಕಲ್ಲ? ಕೊನೆಗೆ ಒಂದಿಷ್ಟು, ಸವತೆ, ಟೊಮ್ಯಾಟೋ, ಒಂದೆರಡು ತುಂಡು ಬ್ರೆಡ್ಡು ಸಿಕ್ತು ಅದನ್ನೇ ತಿಂದು ನನ್ನ ಹೊಟ್ಟೆ ಹೊರೆದುಕೊಳ್ಳಬೇಕಾಯಿತು.

ನಂಗೂ ಹಾಳೂ-ಮೂಳು ನೋಡಿ ಸಾಕಾಗಿತ್ತು. ಏನ್ ನೋಡೋದು ಅಂತ ಯೋಚಿಸುತ್ತಿದ್ದಾಗಲೆ, ಗೃಹಭಂಗ ನನ್ನ ತೆಲೆಯಲ್ಲಿ ಮಿಂಚಿ ಮರೆಯಾಗಿತ್ತು. ಸರಿ ಹುಡುಕಲು ಹೊರಟೆ, ಕಾಸರವಳ್ಳಿಯವರ ದಾರವಾಹಿ ಕ್ಷಣಾರ್ಧದಲ್ಲೇ ಸಿಕ್ಕಾಗ ಖುಷಿಯಾಗಿತ್ತು. ಕೊನೆಗೂ ನನ್ನ ಬೇಸರ ಕಳೆಯುವ ಸಾಧನವೊಂದು ದೊರಕ್ಕಿತ್ತು. ಒಂದಾದ ಮೇಲೊಂದು ಕಂತುಗಳನ್ನ ನೋಡುತ್ತಾ ಮಧ್ಯ ರಾತ್ರಿಯಾಗಿದ್ದೆ ತಿಳಿಯಲಿಲ್ಲ, ಅಷ್ಟರಲ್ಲಿ ಆ ಮಹಾನುಭಾವ ಎದ್ದು, ಊಟದ ಮೇಜನ್ನು ಸಿದ್ದಪಡಿಸಲು ಶುರು ಮಾಡಿದ್ದ, ಕೊನೆಗೂ ಅವರ ತಯಾರಿಗಳು ಮುಗಿದಿತ್ತು. ನಾನೂ ಎದ್ದು ಸ್ವಲ್ಪ ಸಹಾಯ ಮಾಡಿದ್ದೂ ಆಯಿತು. ಊಟದೊಂದಿಗೆ ಪಾನ ಗೋಷ್ಠಿ ಮತ್ತೆ ಸುರುವಾಯ್ತು. ನಂಗೆ ತಿನ್ನಲು ಒಂದಷ್ಟು ಹಣ್ಣುಗಳು, ಸಿಹಿ ತಿನಿಸುಗಳು ದೊರೆತವು. ಟಿವಿಯಲ್ಲಿ ಮಾಸ್ಕೋದ ವಿವಿದೆಡೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ನೇರ ಪ್ರಸರಣವಾಗುತ್ತಿದ್ದವು, ಸಮಾನಾಂತರವಾಗಿ ಗಣಕದಲ್ಲಿ ಗೃಹಭಂಗ ಅವ್ಯಾಹತವಾಗಿ ಸಾಗಿತ್ತು. ಇನ್ನೇನು ಹನ್ನೆರಡು ಸಮೀಪಿಸುತ್ತಿದೆ ಎಂದಾಗ, ಟಿವಿ ಪರದೆಯ ಮೇಲೆ ಪುತಿನ್ ಕಾಣಿಸಿಕೊಂಡು ರಷ್ಯನ್ ನಲ್ಲಿ ಹೊಸ ವರುಷದ ಸಂದೇಶ ಕೊಡಲು ಶುರು ಮಾಡಿದಾಗ ಎಲ್ಲರೂ ಎದ್ದು ನಿಲ್ಲಲು ನಾನೂ ನನ್ನ ಗೃಹಭಂಗದಿಂದ ಹೊರಬಂದು ಅವರ ಜೊತೆಗೂಡಬೇಕಾಯಿತು. ಒಂದೆರಡು ನಿಮಿಷಗಳ ನಂತರ ರೆಡ್-ಸ್ಕ್ವೇರ್ ನಲ್ಲಿರೊ ದೊಡ್ಡ ಗಡಿಯಾರ ಹನ್ನೆರಡು ಗಂಟೆಗಳನ್ನ ಬಾರಿಸುವುದರೊಂದಿಗೆ ಕೋಣೆಯಲ್ಲಿ ಹರುಷ ಉಕ್ಕೇರತೊಡಗಿತು. ಹೊಸ ಶಾಂಪೇನ್ ಬಾಟಲಿಯಿಂದ ಮದಿರೆ ನೊರೆ ನೊರೆಯಾಗಿ ಗ್ಲಾಸ್'ಗಿಳಿಯಿತು ನಾನೂ ಅಲ್ಲೇ ಇದ್ದ ಕೋಕ-ಕೋಲಾವನ್ನು ನನ್ನ ಗ್ಲಾಸ್'ಗೆ ತುಂಬಿಸಿದೆ. ಚಿಯರ್ಸ್ ಹೇಳುವ ಮುನ್ನ, ನನ್ನ ಬಾಸ್ ಏನೋ ಹೇಳಲು ಶುರು ಮಾಡಿದ. ನನ್ನೆಡೆ ನೋಡುತ್ತಾ, ಕಳೆದ ವರುಷ ನಾವೆಲ್ಲರೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇವೆ, ಈ ಹೊಸ ವರುಷದಲ್ಲಿ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುವ ಎಂದು ಹೇಳಿ ಚಿಯರ್ಸ್ ಹೇಳಿದ್ದಾಯಿತು. ಸ್ವಲ್ಪ ಹೊತ್ತು ಕೂತು ಮತ್ತೊಂದಿಷ್ಟು ಹಣ್ಣು, ಸಿಹಿ ತಿನಿಸುಗಳನ್ನು ತಿಂದದ್ದಾಯಿತು, ಜೀವಂತವಾಗಿರಬೇಕಿತ್ತಲ್ಲ!! ಮತ್ತೆ ಗೃಹಭಂಗ ನನ್ನನ್ನು ಆಪೋಶನಗೈದಿತ್ತು. ಆದರೆ ಅವನು ಬಿಡಬೇಕಲ್ಲ, ಬನ್ನಿ ಎಲ್ಲರೂ ಇಲ್ಲೇ ಹತ್ತಿರದಲ್ಲಿ ನಡೆಯುತ್ತಿರುವ ಸಂಗೀತ ಕೂಟಕ್ಕೆ ಹೋಗೋಣವೆಂದು ಎಲ್ಲರನ್ನು ಹುರಿದುಂಬಿಸಿದ. ನಾನೂ ಹೊರಡಬೇಕಾಯಿತು, ಮಾಸ್ಕೊನಲ್ಲಿ ಆ ಸರಿರಾತ್ರಿ ಯಲ್ಲಿ ಹೊರ ಹೋಗಬೇಕಂದರೆ ಎಂಟೆದೆ ಇರಲೇ ಬೇಕು, ಸೆಕ್ಯುರಿಟಿ ಸಮಸ್ಯೆಯಲ್ಲ, ಉಷ್ಣಾಂಶ!! ಮೈನಸ್ ೧೫ ರ ಆಸುಪಾಸಿನಲ್ಲಿ ಇತ್ತು. ಈಗೀಗ ನನಗೆ ಹೊಂದಿಕೆ ಯಾಗಿಬಿಟ್ಟಿದೆ, ಅದರೂ ಚಳಿಯಲ್ಲಿ ಹೊರಗೆ ಹೋಗಿ ಕುಣಿಯುವುದು ಅಂದ್ರೆ ಸುಮ್ನೆ ತಮಾಷೆಯಲ್ಲ! ಇನ್ನೇನ್ ಮಾಡೋಕೆ ಆಗುತ್ತೆ ಅಂತ ಜೊತೆಗೆ ಹೋದೆ. ಅಲ್ಲೇ ಹತ್ತಿರದ ಸಮುದಾಯ ಭವನದ ಮುಂದುಗಡೆ ಒಂದು ದೊಡ್ಡ ಕ್ರಿಸ್ಮಸ್ ಮರವನ್ನು ಅಲಂಕರಿಸಿ ಇಟ್ಟಿದ್ರು, ಅದರ ಪಕ್ಕದಲ್ಲೇ ಒಂದೆರಡು ಮಂದಿ ರಷ್ಯನ್ ಸಂತಾ ನ (ರಷಿಯದಲ್ಲಿ ಸಂತಾ ನನ್ನು ಡೆದ್ ಮರೂಜ್ ಅಂತ ಕರೀತಾರೆ, ಅಲ್ಲದೆ ಅವನಿಗೊಬ್ಬಳು ಚಿಕ್ಕ ಮೊಮ್ಮಗಳು, ಸ್ನಿಗುರಿಚ್ಕಾ ಅಂತನೂ ಜೊತೇಲೆ ಇರ್ತಾಳೆ ) ವೇಷ ತೊಟ್ಟು ಹಾಡು ಹೇಳುತ್ತಾ ಜನರನ್ನು ರಂಜಿಸುತ್ತಿದ್ದರು. ಜನ ಬಾಟಲಿಗಳಲ್ಲಿ ತಂದಿದ್ದ ಮದ್ಯವನ್ನು ಕುಡಿಯುತ್ತ ಆ ಕ್ರಿಸ್ಮಸ್ ಮರದ ಸುತ್ತಲೂ ಹರುಷದಿಂದ ಕುಣಿಯುತ್ತಾ ಸುತ್ತುತ್ತಿದ್ದರು. ನಾನೂ ಅಲ್ಲೇ ಬದಿಯಲ್ಲಿ ನಿಂತು ನನ್ನ ಕೊರೆದು ಹೋಗುತ್ತಿದ್ದ ನನ್ನ ಕೈಗಳನ್ನು ಉಜ್ಜಿ ಬೆಚ್ಚಗೆ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದೆ.ಆ ನನ್ನ ಬಾಸ್ ಬಿಡದೇ ನನ್ನನೂ ಒಂದೆರಡು ಸುತ್ತು ಹಾಕಿಸಿದ. ಹೀಗೆಯೇ ನಡೆದಿತ್ತು ಸಂಭ್ರಮಾಚರಣೆ, ನಾನು ಗೃಹಭಂಗದ ನಂಜಮ್ಮನ ದೌರ್ಭಾಗ್ಯವನ್ನೂ,ಕಂಠಿ ಜೋಯಿಸರ ದುಡುಕುತನವನ್ನೂ ಮನದಲ್ಲೇ ವಿಮರ್ಶಿಸುತ್ತಾ ನಿಂತಿದ್ದೆ. ಒಂದೆರಡು ಗಂಟೆಗಳು ಸರಿದಿರಬಹುದು, ಅಷ್ಟರಲ್ಲೇ ಜೋರಾಗಿ ಕೇಳುತ್ತಿದ್ದ ಸಂಗೀತ ಸ್ತಬ್ಧವಾಯಿತು, ಹಾಡುಗಾರರು ಹಾಡುವುದನ್ನು ನಿಲ್ಲಿಸಿ ತಮ್ಮ ಪರಿಕರಗಳನ್ನು ಪ್ಯಾಕ್ ಮಾಡುತ್ತಾ ನಿಂತರು.ಸೇರಿದ್ದ ಜನರು ಬೇಗ ನಿಲ್ಲಿಸಿದ್ದಕ್ಕೆ ಬೇಸರವ್ಯಕ್ತಪಡಿಸುತ್ತಾ ವಾಪಾಸ್ ತಮ್ಮ ತಮ್ಮ ಮನೆಗಳಿಗೆ ಹೊರಟರು. ನಾವೂ ನಮ್ಮ ಬಾಸ್ ಜೊತೆ ಹೊರಟೆವು. ಆಹೊತ್ತಿಗಾಗಲೇ ಗಡಿಯಾರ ೩-೩೦ ಎಂದು ತೋರಿಸುತ್ತಿತ್ತು, ಇನ್ನು ಮಲಗಿದರೆ ಬೆಳಗ್ಗೆ ಮದ್ಯಾನ್ಹದ ಮೇಲೆಯೇ ಏಳುವುದು, ನಾಳೆಯೂ ಇವನ ಜೊತೆಗೇ ಸುತ್ತಬೇಕಾದೀತು ಎಂದೆನಿಸಿ, ನಾನು ಗಂಟೆ ಆರರವರೆಗೆ ಎದ್ದಿದ್ದು ನನ್ನ ಮನೆಯಕಡೆಗೆ ಹೊರಡುವುದೆಂದು ತೀರ್ಮಾನಿಸಿ, ನನ್ನ ಬಾಸ್’ಗೂ ಒಪ್ಪಿಸಿ ಮತ್ತೆ ಗೃಹಭಂಗವನ್ನೊಕ್ಕು ಕೂತೆ. ಸಂಗಡಿಗರು ಮತ್ತೊಮ್ಮೆ ತಿನ್ನಲು, ಪಾನ ಸೇವಿಸಲು ಕುಳಿತರು

ನಂಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಕಿರಿಯ ಸಹೋದ್ಯೋಗಿಯೊಬ್ಬ ಇನ್ನೊಂದು ಹತ್ತು ನಿಮಿಷದಲ್ಲಿ ಹೊರಡಲು ರೆಡಿಯಾಗು ಎಂದಾಗಲೇ ನಂಗೆ ಅರಿವಾಗಿದ್ದು. ಅಷ್ಟೊತ್ತಿಗಾಗಲೇ ಗಂಗಮ್ಮ ಚೆನ್ನಿಗರು ನಂಜಮ್ಮನ ಒಡವೆಗಳನ್ನು ಕಾಸಿಂ ಬಡ್ಡಿ ಸಾಹುಕಾರನ ಹತ್ತಿರ ಅಡಮಾನ ಇಡುವ ನಿರ್ಧಾರ ಮಾಡಿಯಾಗಿತ್ತು. ಒಲ್ಲದ ಮನಸ್ಸಿನಿಂದ ಗೃಹಭಂಗ ವನ್ನು ಅಲ್ಲಿಗೆ ನಿಲ್ಲಿಸಿ ಮನೆಗೆ ಹೋಗುವ ತಯಾರಿ ನೆಡೆಸತೊಡಗಿದೆ. ಮನೆಗೆ ಮರಳುವ ದಾರಿಯಲ್ಲಿ ನನ್ನ ಕಿರಿ ಸಹೋದ್ಯೋಗಿ ಯೊಬ್ಬರು ನಾನು ಇಡೀ ರಾತ್ರಿ ಅಷ್ಟು ಆಸಕ್ತಿಯಿಂದ ನೋಡುತ್ತಿದ್ದ ಆ ಕಾರ್ಯಕ್ರಮವೇನು ಎಂದು ಕೇಳಲು ನಾನು ಅತ್ಯುತ್ಸಾಹದಿಂದ ವಿವರಿಸಲು ಶುರು ಮಾಡಿದೆ. ಭೈರಪ್ಪ ರನ್ನು ಯಾರಿಗೆ ಹೋಲಿಸಿದರೆ ಸರಿಯಾದೀತು ಎಂದು ಯೋಚನೆ ಮಾಡುತ್ತಾ ಇದ್ದಾಗ ತಟ್ಟನೆ ಹೊಳೆದದ್ದು. ಲಿಯೇವ್ ಟಾಲ್’ಸ್ಟಾಯ್ . ಆ ಕಿರಿಯ ಮಿತ್ರ ತುಂಬಾ ಆಸಕ್ತಿಯಿಂದ ಕೇಳಲು ಶುರು ಮಾಡಿದರು. ಹಾಗೆಯೇ ಹೇಳುತ್ತಾ, ಈ ಲಿಯೇವ್ ಅನ್ನೋ ನಾಮವನ್ನು ಆಂಗ್ಲದಲ್ಲಿ ಲಿಯೋ ಎಂದು ಭಾಷಾಂತರಿಸಿದ್ದರ ಬಗ್ಗೆ ಹೇಳಿದಾಗ (ಇದು ಗೊತ್ತಾದದ್ದು ಇನ್ನೊಬ್ಬ fb ಮಿತ್ರ ರೋಹಿತ್’ರಿಂದ) ಆತ ಆಶ್ಚರ್ಯ ದಿಂದ ಹೆಸರನ್ನು ಭಾಷಾಂತರ ಮಾಡುವುದು ತಪ್ಪಲ್ಲ್ಲವೇ ಎಂದ. ನನಗೂ ಅದು ಸರಿ ಎನಿಸಿತು. ಅಷ್ಟರಲ್ಲಿ ನಮ್ಮ ಬಸ್ಸು ಬಂದದ್ದರಿಂದ ನಮ್ಮ ಮಾತುಕತೆ ತುಂಡರಿಸಿ ಹೋಯಿತು. ಬಸ್ಸಲ್ಲಿ ಕೂತ ನಂತರ ನನ್ನ ಮನಸ್ಸು ಎಲ್ಲೆಲ್ಲಿಗೋ ಕೊಂಡೊಯ್ಯಿತು. ಈ ಹೆಸರುಗಳ ಆಂಗ್ಲೀಕರಣ ವಿಚಾರಕ್ಕೆ ಬಂದಾಗ ಮೊದಲಿಗೆ ಬರುವುದು ನಮ್ಮ ಊರುಗಳ ಹೆಸರನ್ನು ಹಾಳುಗೆಡವಿದ್ದು. ನಂಗೆ ಯಾವಾಗಲೂ ನೆನಪಾಗುವುದು, ಉಡುಪಿಯ ಹತ್ತಿರದ ಕಾಪು. ಕನ್ನಡದೆಲ್ಲೇನೋ ಅದರ ಹೆಸರು ಕಾಪು ಅಂತಲೇ ಇದೆ, ಆದರೆ ಆಂಗ್ಲ ದಲ್ಲಿ ಬರೆಯುವಾಗ ಮಾತ್ರ ‘ಕಾಪ್’(kaup) ಆಗಿಬಿಡುತ್ತೆ. ನನ್ನ ದ. ಕ. ಮಿತ್ರರಲ್ಲಿಯೂ ಕೇಳಿದಾಗ ಅವರು ನಕ್ಕು ಸುಮ್ಮನಾದರಷ್ಟೇ. ಹಾಗೆಯೇ ಇನ್ನೊಂದು ಬೆಳ್ಮಣ್ ಅಥವಾ ಬೆಳ್ಮಣ್ಣು, ಈ ಹೆಸರನ್ನು ನಾನು ಮೊದಲು ಯಾವುದೊ ಒಂದು ಬಸ್ಸಿನ ಮೇಲೆ ನೋಡಿದ್ದಾಗ BELMAN ಅಂದಿತ್ತು, ಇದ್ಯಾವ ಹೆಸರು ಬೆಲ್’ಮ್ಯಾನ್ ಅಂತ ತೆಲೆಬಿಸಿ ಮಾಡಿಕೊಂಡಿದ್ದೂ ಉಂಟು, ಕೊನೆಗೆ ನೈಜ ಹೆಸರು ಗೊತ್ತಾಯಿತು ಬಿಡಿ. ಹಾಗೆಯೇ ನೋಡುತ್ತಾ ಹೋದರೆ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ. ನಾನು ಗಮನಿಸಿದ ಇನ್ನೊಂದು ವಿಚಾರವೆಂದರೆ, ಕೆಲವೊಬ್ಬರ ಹೆಸರುಗಳು ಆಂಗ್ಲದಲ್ಲಿ ಬರೆಯುವಾಗ ತಮ್ಮತನವನ್ನು ಪೂರ್ತಿಯಾಗಿಯೇ ಕಳೆದು ಕೊಂಡು ಬಿಡುತ್ತವೆ, ಅವನ್ನು ಹ್ಯಾಗಿದಿಯೋ ಹಾಗೆಯೇ ಬರೆಯಬಹುದಾದರು ನಮ್ ಜನ ಉಪಯೋಗಿಸುವ ವಿಧಾನವೇ ಬೇರೆ. ಉದಾಹರಣೆಗೆ, ಶೆಣೈ, ಇದನ್ನ shanai ಅಂತ ಬರೆಯಬಹುದಾದರೂ ನಮ್ಮವರು shenoy ಅಂತಾನೆ ಬರೆಯೋದು, ಇದು ಶನೋಯ್ ಅಂತಾಗಲ್ಲಿಲ್ಲವೇ? ಇನ್ನೊಂದು ನಾಯಕ್ ಇದನ್ನ nayak ಬರೆದರೆ ಸರಿ ಆದರೆ ಕೆಲವರು naik ಅಂತಾನೆ ಬರೆಯೋದು (ಇದರಲ್ಲಿ ಜಾತಿ-ಸಮೀಕರಣ ಇದೆ ಎಂದು ನನಗೆ ಗೊತ್ತಿದೆ, ಇದೊಂದರಿಂದಲೇ ತಿಳಿಯುತ್ತೆ ನಮ್ ದೇಶದಲ್ಲಿ ಜಾತಿ ಪದ್ದತಿಗೆ ಅಡಿಗಲ್ಲು ಹಾಕಿದವರು ಯಾರು ಎಂದು), ಕೆಲವೊಬ್ಬರು ದೇವಯ್ಯ ನನ್ನು ಆಂಗ್ಲದಲ್ಲಿ devayya ಅಂದರೆ ಇನ್ನು ಕೆಲವರು devaiah ಅನ್ನುವರು. bhatta ಹೋಗಿ bhat ಆಗಿದೆ, ಒಂದು ಕೈ ಮೇಲೆ ಅನ್ನುವಂತೆ ಈಗೀಗ ಕನ್ನಡದಲ್ಲೂ ಭಟ್ ಅಂತಲೇ ಬಹುಪಾಲು ಜನ ಉಪಯೋಗಿಸುವುದು. ಈ ತರಹದ ವಿಚಾರಗಳಿಂದ ಗೊತ್ತಾಗೋ ಒಂದು ಬಹುಮುಖ್ಯ ವಿಚಾರವೆಂದರೆ ಇಡೀ ಪ್ರಪಂಚದಲ್ಲಿ ನಮ್ಮ ಭಾರತೀಯರಷ್ಟು ಅಭಿಮಾನ ಹೀನರು ಮತ್ತೊಬ್ಬರಿಲ್ಲ ಅನ್ನುವುದು. ಯಾಕಪ್ಪ ಅಂದ್ರೆ ನಾನು ಲಿಯೇವ್ ಅಥವಾ ಲೆವ್ ಟಾಯ್’ಸ್ಟಾಯ್ ನನ್ನು ಲಿಯೋ ಅಂದ ತಕ್ಷಣ ಅದು ತಪ್ಪು, ಹಾಗೆ ಹೆಸರನ್ನು ಭಾಷಾಂತರ ಮಾಡುವುದು ಸರಿಯಲ್ಲ ಅಂದಿದ್ದು ನನ್ನ ಕಿರಿಯ ಸಹೋದ್ಯೋಗಿ , ಆತನಿಗಿನ್ನು ೨೨ ರ ಹರೆಯ, ಈ ವಯಸ್ಸಿನ ಅದೆಷ್ಟು ಭಾರತೀಯರು ಭಾರತೀಯತೆಯನ್ನು ಈ ರೀತಿ ಸಮರ್ಥನೆ ಮಾಡಿಕೊಂಡಾರು? ನನಗೆ ಆತನ ಮೇಲೆ ಇದ್ದ ಗೌರವ ಇದರಿಂದ ಹೆಚ್ಚಾದದ್ದು ಸುಳ್ಳಲ್ಲ. ಹಾಗೆಯೇ ಯೋಚಿಸುತ್ತ ಮುಂದುವರೆದು ಈ ಆಂಗ್ಲರಿಗೆ ಸರಿಯಾದ ಪಾಠ ಕಲಿಸಲು ನಾವ್ಯಾಕೆ ಅವರ ಡಿಕ್’ಸನ್, ಹ್ಯಾರಿ, ಹಡ್ಸನ್ ಗಳನ್ನ ಕನ್ನಡೀಕರಣ (!!!) ಮಾಡಬಾರದು ಎಂದು ನೆನೆದು, ಸಂಭವನೀಯ ಭಾಷಾಂತರವನ್ನೂ ನೆನೆಸಿಕೊಂಡು ಸಿಕ್ಕಾಪಟ್ಟೆ ನಗುವೂ ಬಂತು. ಅಷ್ಟರಲ್ಲಿ ನಾನು ಇಳಿಯೋ ನಿಲ್ದಾಣ ಬಂತು.ನನ್ನ ಉಡುಪುಗಳನ್ನು ಸರಿಯಾಗಿ ಗಾಳಿ ಒಳಹೋಗದ ಹಾಗೆ ಬಿಗಿದು ನಿಂತೇ. ನಿಲ್ದಾಣ ದಿಂದ ಹೊರಬೀಳುತ್ತಿದ್ದಂತೆಯೇ ಕೊರೆಯುವ ಚಳಿ ನಮ್ಮನ್ನು ಸ್ವಾಗತಿಸಿತ್ತು. ಮತ್ತೇನನ್ನೂ ಯೋಚಿಸುತ್ತಾ ದಾಪುಗಾಲು ಹಾಕುತ್ತ ಮನೆಯ ಕಡೇ ಹೊರಟೆ.

Wednesday, November 4, 2015

ಗುಬ್ಬಿಗಳೆಲ್ಲ ಹೋದವೆಲ್ಲಿಗೆ?


ಇಂದಿನ ದಿನಗಳಲ್ಲಿ ಒಂದು ಪ್ರಾಯದ ಯುವಕರಿಗೆ-ಯುವತಿಯರಿಗೆ ಗುಬ್ಬಿಗಳನ್ನು ಕಂಡರೆ ಅದೇನೋ ಒಂದು ಆನಂದವಾಗುವುದು ಸಹಜ. ಗುಬ್ಬಿಗಳಿಗೂ ನನ್ನಂತಹ ಕೆಲವರಿಗೂ ಒಂಥರಾ ಬಿಡಿಸಿಲಾರದ ನಂಟು, ಬಹುಶಃ ನಮ್ಮ ಅಮ್ಮಂದಿರು ಚಿಕ್ಕಂದಿನಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು “ಹೇ ಅಲ್ಲಿ ನೋಡು ಗುಬ್ಬಿ” ಎಂದೋ ಅಥವಾ ಯಾವ್ದೋ ಒಂದು ಒಂದು ವಸ್ತುವನ್ನು ನಮ್ಮಿಂದ ಮರೆಮಾಚಲು ಗಾಳಿಯಲ್ಲಿ ಜೋರಾಗಿ ಕೈಯನ್ನು ಆಚೀಚೆ ಆಡಿಸಿ “ಗುಬ್ಬಿ ಕಚ್ಚಿಕೊಂಡು ಹೋಯ್ತು” ಎಂದ್ಹೇಳಿ ನಮ್ಮನ್ನು ಸಮಾಧಾನ ಮಾಡಿದ್ದರಿಂದಲೋ ನನಗೆ ಈಗಲೂ ಗುಬ್ಬಿಗಳನ್ನ ಕಂಡಾಗ ಅತೀವ ಆನಂದವಾಗುತ್ತೆ. ನಮ್ ದೇಶದಲ್ಲಿ ಈಗೀಗ ಗುಬ್ಬಿಗಳನ್ನು ನೋಡುವುದು ಅಪರೂಪವಾಗಿದೆ, ನಾನು ಮಂಗಳೂರಿನಲ್ಲಿ ಇದ್ದಾಗ, ಜನನಿಬಿಡ ಕೇಂದ್ರ ಮಾರುಕಟ್ಟೆಯಲ್ಲಿ ಇದ್ದ ಎಲೆಕ್ಟ್ರಾನಿಕ್ ಸಾಮಗ್ರಿಗಳ ಅಂಗಡಿಯೊಂದರಲ್ಲಿ ನೋಡಿದ್ದೆ. ಆನಂತರ ಅಲ್ಲೊಂದು ಇಲ್ಲೊಂದು ಗುಬ್ಬಿ ನೋಡಿದ್ದು ಬಿಟ್ರೆ ಮನಸ್ಸಿಗೆ ಮುದ ಕೊಡುವ ಗುಬ್ಬಿಗಳ ಹಿಂಡನ್ನು ನೋಡಿದ್ದು ಕಡಿಮೆ. ಮಂಗಳೂರು ಬಿಟ್ಟಾಯಿತು, ಬೆಂಗಳೂರನ್ನೂ ನೋಡಿದ್ದಾಯಿತು ಆದರೆ ಅಲ್ಲೂ ಗುಬ್ಬಿಗಳನ್ನು ನೋಡಿದ್ದು ಕಡಿಮೆಯೇ ಎನ್ನಬಹುದು. ಸಾಮಾನ್ಯವಾಗಿ ಎಲ್ಲರೂ ಹೇಳುವ ಪ್ರಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೆಲ್ ಫೋನ್ ಬಳಕೆಯಿಂದಾಗಿ ಗುಬ್ಬಿಗಳು ಕಡಿಮೆಯಾಗಿಬಿಟ್ಟಿವೆ ಎಂಬ ತರ್ಕಹೀನ ಕಾರಣವನ್ನೇ ನಾನೂ ನಂಬಿದ್ದೆ. ಆಮೇಲೆ ಆ ವಿಷಯ ಮರತೇ ಹೋಗಿತ್ತು. ಮತ್ತೆ ನನ್ನ ಗುಬ್ಬಿಗಳ ಕುರಿತಂತೆ ಕುತೂಹಲ ಗರಿಗೆದರಿದ್ದು ಇನ್ನೊಂದು ನಗರದಲ್ಲಿ ಹಿಂಡುಗಟ್ಟಲೆ ಗುಬ್ಬಿಗಳನ್ನು ನೋಡಿದಾಗ, ಅದೂ ಜನನಿಬಿಡ ರಸ್ತೆಗಳ ಪಕ್ಕದಲ್ಲಿ, ಶಾಪ್ಪಿಂಗ್ ಮಾಲ್’ಗಳ ಹತ್ತಿರ, ಅಷ್ಟೇ ಯಾಕೆ ನಾನು ದಿನ ಕಛೇರಿಗೆ ಹೋಗುವ ದಾರಿಯಲ್ಲಿ. ಒಮ್ಮೆಯಂತೂ, ನನ್ನ ಸ್ನೇಹಿತನೊಬ್ಬನ ಜೊತೆಯಲ್ಲಿ ವಸ್ತುಪ್ರದರ್ಶನ ಸಮುಚ್ಚಯದ ಹತ್ತಿರ ಗುಬ್ಬಿಯೊಂದನ್ನು ಕಂಡು ನನ್ನ ವಯಸ್ಸನ್ನೂ ಮರೆತು ಅದರ ಜೊತೆ ಸಣ್ಣ ಮಗುವಿನ ಹಾಗೆ ಆಟವಾಡಿದ್ದೆ, ಆಗ ನನ್ನ ಆ ಸ್ನೇಹಿತ “ನೀನು ತುಂಬಾ ಒಳ್ಳೆಯ ಮನಸ್ಸಿನವನು” ಎಂದಾಗ ನಾಚಿಕೆಯೂ ಆಗಿದ್ದು ನಿಜ. ಇರಲಿ ಇದು ಯಾಕೋ ದಾರಿ ತಪ್ಪುತ್ತಿದೆ.

ಮತ್ತೆ ನಮ್ ನಗರಗಳಲ್ಲಿ ಗುಬ್ಬಿಗಳು ಕಾಣೆಯಾಗುತ್ತಿರುವ ವಿಚಾರಕ್ಕೆ ಬರೋಣ. ಹಾಗೆಯೇ ಗೂಗಲ್ ಮಾಡಿದಾಗ ತಿಳಿದುಬಂದ ವಿಷಯಗಳು ಇವು. ವಿಕಿರಣಗಳು ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುವುದು ಸಹಜ, ಆದರೆ ಬರೀ ಗುಬ್ಬಿಗಳೇ ಕಾಣೆಯಾಗಿರುವುದಕ್ಕೆ/ಕಡಿಮೆಯಾಗಿರುವುದಕ್ಕೆ ಇದೆ ಕಾರಣವಲ್ಲ. ಗುಬ್ಬಿಗಳ ಪ್ರಮುಖ ಆಹಾರ ಕ್ರಿಮಿ ಕೀಟಗಳು, ಈ ಹಿಂದೆ ನಮ್ಮ ಮನೆಗಳು ಹೆಚ್ಚಾಗಿ ಮರ-ಮುಟ್ಟುಗಳಿಂದ ಮಾಡಿದ್ದವಾದ್ದರಿಂದ ನಗರಗಳಲ್ಲೂ ಗುಬ್ಬಿಗಳಿಗೆ, ಕಂಬಗಳಲ್ಲಿ ಜಂತಿಯ ಸಂದಿಗಳಲ್ಲಿ ಕ್ರಿಮಿಗಳು ದೊರೆಯುತ್ತಿದ್ದರಿಂದ ನಮ್ ಮನೆಗಳಲ್ಲೂ ಗುಬ್ಬಿಗಳು ಇರುತ್ತಿದ್ದುದು ಸಹಜ. ಈಗೀಗ ನಮ್ಮ ಮನೆಗಳ ಬಹುಪಾಲು ಕಾಂಕ್ರೀಟ್ ಆಗಿರುವುದರಿಂದ ಗುಬ್ಬಿಗಳ ಸಹಜ ಆಹಾರ ದೊರೆಯುತ್ತಿಲ್ಲ. ಮೇಲಾಗಿ ನಮ್ ನಗರಗಳಲ್ಲಿ ನಾವು ಮರಗಳನ್ನು ಉಳಿಸಿಯೇ ಇಲ್ಲ, ಹೀಗಾಗಿ ಗುಬ್ಬಿಗಳಿಗೆ ಆಹಾರ ಸಿಗುವ ಸಾಧ್ಯತೆ ಅತೀ ಕಡಿಮೆ. ಆಮೇಲೆ, ಕೆಲವೊಂದು ಪ್ರಬೇಧಗಳಿಗೆ ಯತೇಚ್ಛ ಆಹಾರ ದೊರೆಯುತ್ತಿರುವುದರಿಂದ ಜೀವಸಂತುಲನೆಯೂ ಸರಿಯಿಲ್ಲದ್ದರಿಂದಲೂ ಗುಬ್ಬಿಗಳು ಕಡಿಮೆಯಾಗಿರಬಹುದು ಎಂದು ಕೆಲವೊಂದು ಅಧ್ಯಯನಗಳು ತಿಳಿಸುತ್ತಿವೆ. ಉದಾಹರಣೆಗೆ ಪಾರಿವಾಳಗಳಿಗೆ ಆಹಾರ ಹಾಕುವವರ ಸಂಖ್ಯೆ ನಗರಗಲ್ಲಿ ಜಾಸ್ತಿ ಇದರಿಂದ ಪಾರಿವಾಳಗಳ ಸಂಖ್ಯೆ ಜಾಸ್ತಿ ಆಗಿ ಗುಬ್ಬಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ ಎನ್ನತ್ತದೆ ಸದರಿ ಅಧ್ಯಯನ.

ಜೀವ ವಿಜ್ಞಾನಿಗಳ ಪ್ರಕಾರ ಗುಬ್ಬಿಗಳ ಸಂಖ್ಯೆ ಆ ಪ್ರದೇಶದ ಜೈವಿಕ ಪರಿಸರದ ಮಟ್ಟವನ್ನು ಸೂಚಿಸುತ್ತೆ. ಯಾವುದೇ ಒಂದು ಕಡೇ ಗುಬ್ಬಿಗಳು ಕಡಿಮೆಯಾಗಿದೆ ಅಂದರೆ ಅದರರ್ಥ ಅಲ್ಲಿನ ಪರಿಸರದ ಗುಣಮಟ್ಟ ಸರಿಯಿಲ್ಲವೆಂದೇ ಅರ್ಥ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು. ಜೆ ಏನ್ ಯು ನ ಡಾ. ಸೂರ್ಯ ಪ್ರಕಾಶ್’ರವರ ಪ್ರಕಾರ ನಮ್ಮ ದೇಶದಲ್ಲಿ ಗುಬ್ಬಿಗಳ ಸಂಖ್ಯೆ ಪ್ರತಿಶತ ೫೦ ರಷ್ಟು ಕಡಿಮೆಯಾಗಿದೆ. ಇದು ಕೆಲವೊಂದು ರಾಜ್ಯದಲ್ಲಿ ೮೦ ಪ್ರತಿಶತದಷ್ಟೂ ಇದೆ ಎನ್ನುತ್ತಾರವರು.

ಈಗ ಮತ್ತೆ ನಾನಿರುವ ನಗರದ ವಿಚಾರಕ್ಕೆ ಬರೋಣ, ಇಲ್ಲಿ ನಾನು ನೋಡಿದ ಪ್ರಕಾರ ಗುಬ್ಬಿಗಳ ಸಂಖ್ಯೆ ಯತೇಚ್ಛವಾಗಿಯೇ ಇದೆ. ಇದಕ್ಕೆ ಕಾರಣ ಇಲ್ಲಿನ ಸಸ್ಯಸಂಪತ್ತು. ಇದೊಂದು ಅತೀ ದೊಡ್ಡ ನಗರವಾಗಿದ್ದರೂ, ನೂರಾರು ಹೆಕ್ಟೇರು ಗಳಷ್ಟು ದೊಡ್ಡದಾದ ಅನೇಕ ಉಧ್ಯಾನವನಗಳು ಇಲ್ಲಿ ಬೇಕಾದಷ್ಟಿವೆ (ಅದರಲ್ಲೂ ನಗರ ಮಧ್ಯದಲ್ಲೇ!!). ಒಂದಂತೂ ಬರೋಬ್ಬರಿ ೧೬೦೦ ಹೆಕ್ಟೇರ್ ಇದೆಯಂತೆ!! ಇನ್ನು ಸಣ್ಣ ಪುಟ್ಟ ಉಧ್ಯಾನವನಗಳಿಗೆ ಬರವೇ ಇಲ್ಲ, ಪ್ರತಿಯೊಂದು ಗಲ್ಲಿಗೂ ಒಂದು ಸಣ್ಣ ಪಾರ್ಕ್ ಇದ್ದೇ ಇದೆ. ವಿಕಿಪೀಡಿಯಾ ಹೇಳುವ ಪ್ರಕಾರ ಇಲ್ಲಿ ೨೨ ಪ್ರಮುಖ ಉಧ್ಯಾನವನಗಳಿವೆಯಂತೆ (ಇದರಲ್ಲಿ ನಾನು ಒಂದು ೧೦ ಉಧ್ಯಾನವನಗಳಿಗೆ ಭೇಟಿ ಕೊಟ್ಟಿರುವೆ), ಹಾಗಾಗಿ ಇಲ್ಲಿಯ ಜೀವವೈವಿಧ್ಯತೆಗೆ ಯಾವುದೇ ಚ್ಯುತಿ ಬಂದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಇದೊಂದು ಜಗತ್ತಿನಲ್ಲಿಯೇ ಪ್ರಮುಖ ನಗರ. ಇಲ್ಲಿ ಸಾಧ್ಯವಾಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂದು ನನ್ನಲ್ಲಿ ಯಾವಾಗೂ ಪ್ರಶ್ನೆಯೊಂದು ಪ್ರತೀ ಸಲ ಗುಬ್ಬಿಯನ್ನು ನೋಡಿದಾಗ ಹುಟ್ಟುತ್ತಲೇ ಇರುತ್ತೆ!!



ಆಧಾರ:



http://southasia.oneworld.net/news/disappearing-sparrow-common-bird-goes-uncommon#.VjoC8_krLIU
http://www.thehindu.com/news/cities/kozhikode/where-have-all-the-sparrows-gone/article4529056.ece

Wednesday, October 14, 2015

ಸಂಬಳ-ಪ್ರಾಮಾಣಿಕತೆ

ಸನ್ಮಾನ್ಯ ಪ್ರತಾಪ ಸಿಂಹರವರು ತಮ್ಮನ್ನು ಟೀಕೆ ಮಾಡಿದವರಿಗೆ ಪ್ರತ್ಯುತ್ತರ ಕೊಟ್ಟು ಬರೆದ ಪತ್ರವೊಂದನ್ನು ಓದಿದೆ. ಅವರ ಹಿಂದಿನ ಪತ್ರವನ್ನೂ ಓದಿ, ನಾನೂ ನನಗನಿಸಿದ್ದನ್ನು fbನಲ್ಲಿ ಹಂಚಿಕೊಂಡಿದ್ದೆ, ಹಾಗೂ ಬೇರೆಯವರ ಅಭಿಪ್ರಾಯಗಳನ್ನೂ ಗಮನಿಸಿದ್ದೆ. ಯಾಕೋ ಪ್ರತಾಪ್’ರವರು ಕೊಟ್ಟ ಉತ್ತರ ಸ್ವಲ್ಪ ಖಾರವಾಗಿದೆ ಎಂದು ನನಗೆ ಅನಿಸುತ್ತಿದೆ. ವಿಪರ್ಯಾಸವೆಂದರೆ ಸಂಸದರಿಗೆ ತಮ್ಮನ್ನು ಜನ ಯಾವ ವಿಚಾರಕ್ಕಾಗಿ ಟೀಕೆ ಮಾಡಿದ್ದರು ಎಂದು ನೋಡದೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಿದ್ದಾರೆ. ನಾನು ಗಮನಿಸಿದ ಪ್ರಕಾರ ಹಲವರು ಸಂಬಳ ಹೆಚ್ಚಳಕ್ಕಿಂತಾ ಹೆಚ್ಚಾಗಿ ಸಂಸದರು ತಮ್ಮ ಮೊದಲ ಪತ್ರದಲ್ಲಿ ಬಳಸಿದ ವಾದಸರಣಿಯನ್ನು ಪ್ರಶ್ನೆ ಮಾಡಿದ್ದಾರೆ. ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ ಹಾಗೆ ಕೆಲವೊಬ್ಬರು ಕಟುವಾದ ಶಬ್ಧಗಳಿಂದ ನಿಂದಿಸಿರಬಹುದು ಆದರೆ ಅನೇಕರ ಪ್ರಶ್ನೆ ಸಾತ್ವಿಕವಾಗಿತ್ತು. ಅಲ್ಲಾ ಈ ಹೊಸ ಪ್ರತಿಕ್ರಿಯೆಯಲ್ಲಿ ತಮ್ಮ ಹಳೆ ವಾದಸರಣಿಯನ್ನು ಮರತೇಬಿಟ್ಟಿದ್ದೀರಲ್ಲ ಗುರುಗಳೇ? ನೀವೇ ತಾನೇ ಹೇಳಿದ್ದು ಸಂಸದರಲ್ಲಿ ಪ್ರಾಮಾಣಿಕತೆಯ ನಿರೀಕ್ಷೆ ಮಾಡಬೇಕಾದಲ್ಲಿ ಮೊದಲು ಸಂಬಳ ಹೆಚ್ಚಿಸಬೇಕು ಎಂದು. ಇದರರ್ಥ ಏನು? ಕಡಿಮೆ ಸಂಬಳ ತಗೊಂಡ್ರೆ ಪ್ರಾಮಾಣಿಕರಾಗಿ ಇರಲು ಕಷ್ಟವೆಂದೇ? ಅದನ್ನೇ ಅನೇಕರು ಕೇಳಿದ್ದು ಸಂಬಳಕ್ಕೂ ಪ್ರಾಮಾಣಿಕತೆಗೂ ಇಲ್ಲದ ಸಂಬಂದ ಕಲ್ಪಿಸಬೇಡಿ ಎಂದು. ಅದಕ್ಕೆ ತಾವು ಕೊಟ್ಟ ಉದಾಹರಣೆ ಅಮೇರಿಕಾ, ಇಂಗ್ಲೆಂಡು ಗಳದ್ದು. ಈ ಥರ ಹೇಳಬೇಕಾದರೆ ನಮ್ಮ ರಾಷ್ಟ್ರದ ಆದಾಯ ಎಷ್ಟಿದೆ ಅದಕ್ಕೆ ಹೋಲಿಸಿದಲ್ಲಿ ನಮ್ಮ ಸಂಸದರಿಗೆ ಕೊಡುವ ಸಂಬಳ ಎಷ್ಟು ಎಂದು ಸ್ವಲ್ಪ ಯೋಚಿಸಬಹುದಿತ್ತು ತಾನೇ (ರೇಖಾಚಿತ್ರಗಳನ್ನು ಬಳಸಿ ಬರೆದ ನನ್ನ ಪೋಸ್ಟ್‘ಗೆ ನಿಮ್ಮ ಉತ್ತರ ಸಿಗಲಿಲ್ಲ!! ನಿಮ್ಮ ಆಪ್ತಸಹಾಯಕನಾದರೂ ಉತ್ತರಿಸಬಹುದಿತ್ತು). ಈಗ ಮಾಹಿತಿ ಹುಡುಕುವುದು ಸುಲಭ ಅನ್ನೋದು ತಮಗೆ ಹೊಳೆಯಲಿಲ್ಲವೇ? ಅದಕ್ಕೆ ತಮ್ಮ ಉತ್ತರವೇನು? ಪ್ರತಿಯೊಂದಕ್ಕೂ ಬೇರೆ ರಾಷ್ಟ್ರಗಳನ್ನ ತೋರಿಸುವುದು ಬಿಡಿ. ಆಮೇಲೆ ನಮ್ಮ ದೇಶದ ನಾಗರೀಕನ ತಲಾ ಆದಾಯ ಗೊತ್ತಿದೆಯೇ ನಿಮಗೆ? ನೀವೇ ೫೦ ಸಾವಿರದಲ್ಲಿ ಸಂಸಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದರೆ ಸಾಮಾನ್ಯ ನಾಗರೀಕನ ಪಾಡೇನು ಗಮನಿಸಿ. ನಿಮಗೆ ಸಂಬಳ ಹೆಚ್ಚು ಬೇಕಿದ್ದಲ್ಲಿ ಕೇಳಿ ಅದಕ್ಕೆ ಯಾರು ಬೇಡವೆನ್ನುತ್ತಾರೆ? ಆದರೆ ತಾವು ಕಡಿಮೆ ಸಂಬಳ ತೆಗೆದುಕೊಳ್ಳುವರ ಪ್ರಾಮಾಣಿಕತೆಯೆನ್ನೇಕೆ ಎಳೆದು ತರುತ್ತೀರಿ. ಇದಕ್ಕೆ ಸರಿಯಾಗಿ ನಿಮ್ಮ ಒಂದಿಬ್ಬರು ಅಭಿಮಾನಿಗಳು ಹೋಟೆಲ್ ಕ್ಯಾಷಿಯರ್ ನ ಉದಾಹರಣೆ ತೆಗೆದುಕೊ೦ಡು ಬರೆದ ಕಥೆಯನ್ನು ಬೇರೆ ಪೋಸ್ಟ್ ಮಾಡುಸಿರುತ್ತೀರಿ (ತಮ್ಮ ಪ್ರತಾಪ್ ಸಿಂಹ MP, ಪುಟದಿಂದ) ತಮ್ಮ ಸಮರ್ಥನೆಗೆ.

ಈಗ ನಿಮ್ಮ ಪ್ರತಿಕ್ರಿಯೆಯಲ್ಲಿ ಬರೆದ ಕೆಲವು ವಿಷಯಗಳ ಬಗ್ಗೆ ಬರೋಣ, ನಿಮಗೆ ಕೆಲಸ ತುಂಬಾ ಇದೆ ಒಪ್ಪೋಣ. ಆದರೆ ಇಡೀ ಸರ್ಕಾರೀ ವ್ಯವಸ್ಥೆಯೇ ನಿಮ್ಮ ಜೊತೆಯಲ್ಲಿ ಇದೆಯಲ್ಲವೇ? ನಿಮ್ಮ ಜೊತೆ ಅನೇಕ ಅಧಿಕಾರಿಗಳು ಕೆಲಸ ಮಾಡುವುದಿಲ್ಲವೇ? ನೀವು ಹೇಳಿದ ಹಾಗೆ ಇಡೀ ಕ್ಷೇತ್ರವನ್ನು ನೋಡಿಕೊಳ್ಳಲು ನೀವೊಬ್ಬರೇ ಇರುವುದಾದರೆ ಈ ಅಧಿಕಾರಿಗಳೆಲ್ಲಾ ಯಾಕೆ? ಹೌದು ಅವರವರ ಅರ್ಹತೆಗೆ ತಕ್ಕ ಹಾಗೆ ಸಂಬಳ ಸಿಗುತ್ತೆ. ಒಬ್ಬ ಜಾಡಮಾಲಿಗೆ ಸಿಗುವ ಸಂಬಳವೇ ಬೇರೆ, ಸಾಫ್ಟ್’ವೇರ್ ಇಂಜಿನೀಯರ್ ಗೆ ಕೊಡುವ ಸಂಬಳವೇ ಬೇರೆ, ಆದರೆ ಅದಕ್ಕೆ ತಕ್ಕ ಹಾಗೆ ಅವನು ಪರೀಕ್ಷೆಗಳನ್ನು ಪಾಸು ಮಾಡಿರುವುದಿಲ್ಲವೇ? ಒಬ್ಬ ಐ ಪಿ ಎಸ್ ಆಗಬೇಕು ಆದ್ರೆ ಅದೆಷ್ಟೋ ವರುಷ ಕುಂಡೆ ನೋಯುವ ಹಾಗೆ ಕೂತು ಓದಿರುವುದಿಲ್ಲವೇ, ಅರ್ಹತಾ ಪರೀಕ್ಷೆ ಪಾಸಾಗಿರುವುದಿಲ್ಲವೇ? ನಿಮ್ಮ ಪ್ರಕಾರ ರಾಜಕಾರಣಿಗಳೂ ಪ್ರೊಫೆಷನಲ್ ಆಗಿ ಸಂಬಳ ಎಣಿಸಬೇಕಾದರೆ ಅವರಿಗೂ ಪರೀಕ್ಷೆ ಇಡಿ. ಸಾರ್ವಜನಿಕ ಆಡಳಿತ, ಭಾರತದ ಸಂವಿಧಾನ ಹಾಗೂ ಇನ್ನಿತರೇ ವಿಷಯಗಳಲ್ಲಿ ಪರೀಕ್ಷೆ ಬರೆದು ಪಾಸಾಗಲಿ. ಈ ತರಹ ಆದರೆ ಇನ್ನೊಂದು ಉಳಿತಾಯವೂ ಆಗುತ್ತೆ. ಅಗ ಐ ಎ ಎಸ್/ಕೆ ಎ ಎಸ್ ಅಧಿಕಾರಿಗಳೇ ಬೇಡ. ನಮ್ಮ ಸಂವಿಧಾನ ಬರೆದವರೆನು ಗುಗ್ಗುಗಳೇ? ನಮ್ಮ ಜನಪ್ರತಿನಿಧಿ ವ್ಯವಸ್ಥೆಯನ್ನು ಈ ರೀತಿ ಇಡಲು. ಇದೆಲ್ಲ ಪೂರ್ವಾಪರಗಳನ್ನು ನೋಡಿಯೇ, ರಾಜಕಾರಣಿಯೆಂದರೆ ಜನಸೇವಕ ಎಂದಿದ್ದು. ಸ್ವಾಮಿ ನಿಮ್ಮಿಂದ ಸುಗಂದರಾಜ ಹಾರವನ್ನು ಯಾರೂ ಬಯಸುವುದಿಲ್ಲ, ನಿಮ್ಮ ಒಂದು ಶುಭ-ಹಾರೈಕೆ ಸಾಕು. ನಿಮ್ಮ ಕಾಫಿ-ಟೀ ಕುಡಿಯೋಕೆ ಜನ ನಿಮ್ಮ ಮನೆಗೆ ಬರೋಲ್ಲ, ತಮ್ಮ ಸಮಸ್ಯೆಗಳು ಪರಿಹಾರವಾದರೆ ಸಾಕು ಅನ್ನೋದು ಅಷ್ಟೇ ಅವರ ಅಭಿಲಾಷೆಯಾಗಿರುತ್ತೆ.

ಆಮೇಲೆ ನಿಮ್ಮ ಸರ್ಕಾರಿ ಶಾಲೆ ಪುರಾಣ, ಸರಳ ಜೀವನದ ಪುರಾಣ ಎಲ್ಲಾ ಹೇಳ್ತಾ ಕೂತರೆ ಈ ಪತ್ರ ಮುಗಿಯುವುದೇ ಇಲ್ಲ. ನಿಮ್ಮ ಥರ ನಮಗೂ ಕೆಲಸಗಳಿರುತ್ತವೆ. ಒಂದೇ ಒಂದು ಕೊನೇ ಮಾತು ಹೇಳಿ ಇದನ್ನ ಇಲ್ಲಿಗೆ ಮುಗಿಸಿಬಿಡ್ತೀನಿ. fb ಪಂಡಿತರು ಅಂದಿರಲ್ಲ, ಅಂತಹ ಪಂಡಿತರದ್ದೂ ನಿಮ್ಮ ಗೆಲುವಿನಲ್ಲಿ ಪಾತ್ರ ಇದೆ. ನಿಮ್ಮ ಗೆಲುವಿನಲ್ಲಿ ಅಷ್ಟೇ ಅಲ್ಲ, ಇವತ್ತು ಮೋದಿಜೀಯವರನ್ನು ಪ್ರಧಾನಿಯನ್ನಾಗಿ ನೋಡೋದಿಕ್ಕೆ ಸೋಶಿಯಲ್ ಮೀಡಿಯಾಗಳೂ ಬಹುದೊಡ್ಡ ಕೊಡುಗೆ ನೀಡಿದ್ದಾವೆ ಅನ್ನೋದು ನಿಮಗೆ ಗೊತ್ತಿರಬೇಕು.

ಆಗ್ಲೇನೆ ಕೊನೆ ಮಾತು ಅಂದಿದ್ದೆ, ಆದರೆ ಇನ್ನೊಂದೇ ಒಂದು ಜರೂರ್ ಮಾತು ಹೇಳಲೇಬೇಕಿದೆ. ಇವತ್ತು ತಮ್ಮನ್ನು ಟೀಕಿಸಿರೋರಲ್ಲಿ ಮುಕ್ಕಾಲು ಪಾಲು ಮಂದಿ ಹಿಂದೊಮ್ಮೆ ತಮ್ಮ ಅಂಕಣಗಳನ್ನು ಓದಿ ಪ್ರಭಾವಿತರಾಗಿದ್ದವರೇ, ತಾವು ಸರಳ ವ್ಯಕ್ತಿಗಳ ಬಗ್ಗೆ ಬರೆದಾಗ ಭೇಷ್ ಅಂದವರೇ, ತಾವು ನಮ್ಮ ನಾಡು-ನುಡಿಯ ಬಗ್ಗೆ, ಭಾಷೆಯ ಬಗ್ಗೆ ಬರೆದಾಗ ಅಹುದಹುದೆಂದವರೇ, ಆದರೆ ನಿಮ್ಮಿಂದ ಈ ತರಹದ ಮಾತುಗಳನ್ನು ನಿರೀಕ್ಷಿಸಿರದ ಅಂತಹ ವ್ಯಕ್ತಿಗಳಿಗೆ ನೀವು ಕನ್ನಡ ಶಾಲೆಯ ಬಗ್ಗೆ, ಕಡಿಮೆ ಸಂಬಳವೂ ಅಪ್ರಾಮಾಣಿಕತೆಗೆ ಕಾರಣ ಎಂಬುವ ಬಗ್ಗೆ, ನಮ್ಮ ದೇಶದ ಆರ್ಥಿಕತೆಯ ಬಗ್ಗೆ ಯೋಚಿಸದೇ ಅಮೇರಿಕಾ, ಇಂಗ್ಲೆಂಡುಗಳಲ್ಲಿ ಸಂಬಳ ಜಾಸ್ತಿ ಅದಕ್ಕೆ ಅಲ್ಲಿ ಪ್ರಾಮಾಣಿಕರು ಜಾಸ್ತಿ ಎಂಬ ನಿಮ್ಮ ವಿಚಿತ್ರ ವಾದಗಳನ್ನು ಬಗ್ಗೆ ಮೊದಲು ಕೇಳಿದಾಗ ಆಘಾತವಾಗುವುದು ಸಹಜ. ಒಂದೆರಡು ಸಾರಿ ಇದೆ ಮುಂದುವರೆದರೆ ಅವರೂ ಅದಕ್ಕೆ ಅಡ್ಜಸ್ಟ್ ಆಗ್ತಾರೆ.

ಬರಹಗಾರನ ಬರಹದಂತೆ ಅವನು ಬದುಕು ಎಂದು ನಂಬಿದ್ದ ನನ್ನದೇ ತಪ್ಪು ಅಷ್ಟೇ. ಈ ವ್ಯಕ್ತಿಯ ಬರಹಗಳನ್ನೇ ನಾನು ಕಾದು ಓದುತ್ತಿದದ್ದು ಎಂದು ನನಗೇ ಆಶ್ಚರ್ಯವಾಗುತ್ತಿದೆ. ಇದೇ ಭಾವನೆ ಅನೇಕರಲ್ಲೂ ಇದೆ ಎಂದು ನನಗನಿಸುತ್ತಿದೆ. ಇನ್ನೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟ ಪಡಿಸಿಬಿಡುತ್ತೇನೆ, ಸಂಸದರಿಗೆ ಸಂಬಳ ಜಾಸ್ತಿ ಮಾಡಬೇಕು ಎಂದು ಸಮರ್ಥನೆ ಮಾಡಿಕೊಳ್ಳಲು ಹಲವಾರು ವಿಚಾರಗಳಿದ್ದವು, ಆದರೆ ಪ್ರತಾಪ್’ರವರು ಮಾಡಿದ ವಾದಸರಣಿಯಿಂದ ತುಂಬಾ ಬೇಸರವಾಗ್ತಿದೆ.



Friday, September 18, 2015

ಪ್ರಧಾನಿಗಳ ವೈಜ್ಞಾನಿಕ ದೃಷ್ಟಿಕೋನ

IISER-ಪುಣೆಯಲ್ಲಿ ಗಣಿತ ಸಹಪ್ರಾದ್ಯಾಪಕರಾಗಿ ಕೆಲಸ ಮಾಡ್ತಾ ಇರೋ ಡಾ. ಸಿನ್ಹ ಇತ್ತೀಚಿಗೆ ನಡೆದ ನಮ್ಮ ಪ್ರಧಾನಿ-ವಿಜ್ಞಾನಿಗಳ ಸಭೆಯಲ್ಲಿ ಭಾಗವಹಿಸಿದ ಬಗ್ಗೆ ಹೇಳ್ತಾರೆ... (ಗೆಳೆಯ Shiva Kumar D T ಹಂಚಿಕೊಂಡ ಲಿಂಕೊಂದನ್ನು ಆಧಾರವಾಗಿಟ್ಟುಕೊಂಡು)

ಹೊಸ ಪ್ರಧಾನಿಗಳು ಅಧಿಕಾರವಹಿಸಿಕೊಂಡ ಮೇಲೆ ನಮ್ಮ ಮಾಧ್ಯಮಗಳಲ್ಲಿ (ಸೋಶಿಯಲ್ ಮಾಧ್ಯಮವೂ ಸೇರಿ) ಎರಡು ರೀತಿಯ ಅತಿರೇಕಗಳು ಕಾಣಿಸ್ತಾ ಇವೆ, ಒಂದು, ಮೋದಿಯವರು ನಮ್ಮ ದೇಶಕ್ಕೆ ಒದಗಿ ಬಂದಿರುವ ಪವಾಡ ಪುರುಷ, ಅವರು ಕ್ಷಣಮಾತ್ರದಲ್ಲಿ ನಮ್ಮ ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಬಿಡ್ತಾರೆ, ಅದೇ ಇನ್ನೊಂದು ವರ್ಗ, ಪ್ರಧಾನಿಗಳ ಪ್ರತಿಯೊಂದು ನಡೆಯನ್ನೂ ಅನುಮಾನಿಸಿ ನೋಡ್ತಾ ಇದಾರೆ. ಈಗ ನಮ್ಮ ವಿಜ್ಞಾನ ಜಗತ್ತಿನಲ್ಲಿ ಎದ್ದಿರುವ ಬಹುಮುಖ್ಯ ವಿಚಾರವೆಂದರೆ, ಮೋದಿ ವಿಜ್ಞಾನಕ್ಕೆ ಯಾವುದೇ ಪ್ರೋತ್ಸಾಹ ಕೊಡ್ತಾ ಇಲ್ಲ, ಸಿಕ್ಕಾಪಟ್ಟೆ ಬಡ್ಜೆಟ್ ಕಡಿತಗೊಳಿಸಿಬಿಟ್ಟಿದ್ದಾರೆ ಎಂಬುದು. ಆದರೆ ಈ ಬಗ್ಗೆ ಖುದ್ದು ನೋಡಿ ನಿರ್ಧರಿಸುವ ಅವಕಾಶ ಅವರಿಗೆ ಈ ಸಭೆಯ ಆಮಂತ್ರಣದಿಂದ ಸಿಕ್ಕಿದ್ದರಿಂದ ಆ ಸಭೆಗೆ ಅವರು ಹಾಜರಾಗಲು ಉತ್ಸುಹುಕರಾಗಿದ್ದರಂತೆ. ಅವರೇ ಹೇಳಿದ ಹಾಗೆ ಅಲ್ಲಿ ನಡೆದ ಪ್ರತಿಯೊಂದು ವಿಚಾರಗಳನ್ನು ಚಾಚುತಪ್ಪದೆ ವಿವರಿಸಲು ಸಾಧ್ಯವಾಗದಿದ್ದರೂ, ಅವರ ಗ್ರಹಿಕೆಗೆ ನಿಲುಕಿದ್ದನ್ನು ತಮ್ಮ ಬ್ಲಾಗ್ ನ ಮೂಲಕ ವ್ಯಕ್ತ ಪಡಿಸಿದ್ದಾರೆ. ಅಲ್ಲಿಂದ ಕೆಲವೊಂದು ವಿಷಯಗಳನ್ನು ಇಲ್ಲಿ ಹಂಚಿಕೊಂಡಿರುವೆ.

ಮೊದಲನೆಯದಾಗಿ, ಪ್ರಧಾನಿಗಳು ಎಲ್ಲಾ ವಿಜ್ಞಾನಿಗಳು ತಮ್ಮ ತಮ್ಮ ವಿಭಾಗಗಳಲ್ಲಿ ಈಗ ನಡೆಯುತ್ತಾ ಇರುವ ಸಂಶೋಧನೆಯಾ ಬಗ್ಗೆ ವಿವರಿಸುತ್ತಾ ಇರುವಾಗ ಪ್ರತಿಯೊಬ್ಬರು ಹೇಳಿದ್ದನ್ನು ಆಸಕ್ತಿಯಿಂದ ಆಲಿಸಿದ್ದು ಅಲ್ಲದೇ ತಮಗೆ ಯಾವುದೇ ಸಂದೇಹವಿದ್ದಲ್ಲಿ ನೇರವಾಗಿ ಆ ವಿಜ್ಞಾನಿಗಳನ್ನೇ ಪ್ರಶ್ನಿಸಿ ತಮ್ಮ ಸಂದೇಹವನ್ನು ಪರಿಹರಿಸಿಕೊಂಡರಂತೆ. ಅದರಲ್ಲೊಂದು 

"ಈಗ ಇರೋ ಕಾಲ್ ಡ್ರಾಪ್ ಸಮಸ್ಯೆ ಯನ್ನು ಗಣಿತ ಸಂಶೋಧನೆಯ ಮೂಲಕ ಬಗೆಹರಿಸಬಹುದೇ?" ಎಂಬುದು. ನಮ್ಮ ದೇಶದಲ್ಲಿ ಸಂಶೋಧನೆಯೇನೋ ನಡೆಯುತ್ತೆ ಆದರೆ ಅದರ ವರ್ಗಾವಣೆ ಜನತೆಗೆ/ಸಮಾಜಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಾ, "ಇಷ್ಟೆಲ್ಲಾ ಕೃಷಿ ಸಂಶೋಧನೆ ನಡೆಯುತ್ತಾ ಇದ್ದರೂ, ನಮ್ಮ ದೇಶದಲ್ಲಿ ಇರೋ ದ್ವಿದಳ ಧಾನ್ಯದ ಇಳುವರಿ ಸಮಸ್ಯೆಯನ್ನು ಯಾಕೆ ಹೋಗಲಾಡಿಸಲಾಗುತ್ತಿಲ್ಲ" ಎಂದು ಹೇಳಿದರಂತೆ.

ವಿಜ್ಞಾನಿಗಳ ಎಲ್ಲ ದೂರು-ದುಮ್ಮಾನಗಳನ್ನು ಬರೆದು ಕೊಂಡ ಪ್ರಧಾನಿ ಕೊನೆಯಲ್ಲಿ,

"ನಿಮ್ಮಲ್ಲೆರ ದೂರುಗಳನ್ನು ಆಲಿಸಿದ್ದೇನೆ ಆದರೆ, ನನ್ನದೂ ಒಂದು ದೂರಿದೆ, ಅದೇನೆಂದರೆ, ನಮ್ಮ ವಿಜ್ಞಾನ ಜಗತ್ತು ತಮ್ಮಲ್ಲಿರೋ ಸಂಪನ್ಮೂಲಗಳನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳುವುದಿಲ್ಲ, ವಿಶಾಲ ಮನೋಭಾವ ಕಡಿಮೆ. ಪರಸ್ಪರ ಹೊಂದಾಣಿಕೆ ಹಾಗೂ ಅಂತರಶಾಸ್ತ್ರೀಯ (interdisciplinary) ವಿಧಾನದಿಂದ ನಮ್ಮ ದೇಶದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ವಿಜ್ಞಾನದಿಂದ ಪಡೆಯಬೇಕಿದೆ ಎಂದರಂತೆ".

ಹೀಗೆಯೇ ನಮ್ಮ ಈಗಿನ ಪ್ರಧಾನಿಗಳಿಗಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಅಲ್ಲಿ ನಡೆದ ಅನೇಕ ಉದಾಹರಣೆಗಳನ್ನು ಕೊಡುತ್ತಾ ವಿವರಿಸುತ್ತಾ ಹೋಗುತ್ತಾರೆ. ಈ ಸಭೆ ಮುಗಿದಮೇಲೆ, ಸದರಿ ಉಪನ್ಯಾಸಕಿ ಪ್ರಧಾನಿಗಳ ವೈಜ್ಞಾನಿಕ ಮನೋಭಾವನೆ ಬಗ್ಗೆ ಹೇಳುತ್ತಾ, ನಮ್ಮಲ್ಲಿನ ಅನೇಕ ಪತ್ರಕರ್ತರ ಹಾಗೆ ಪ್ರಧಾನಿಗಳ (ನಮೋ) ವೈಜ್ಞಾನಿಕ ದೃಷ್ಟಿಕೋನ ಬರೀ ಗಣೇಶ ಹಾಗೂ ಪ್ಲಾಸ್ಟಿಕ್ ಸರ್ಜರಿಗೆ ಸೀಮಿತವಾಗಿಲ್ಲವೆಂದು ತಿಳಿದುಕೊಂಡೆ ಎನ್ನುತ್ತಾರೆ.


ಒಟ್ಟಿನಲ್ಲಿ ಒಂದೊಳ್ಳೆ ಲೇಖನ, ಓದಿ ನೋಡಿ: http://academic-garden.blogspot.in/2015/08/a-meeting-with-prime-minister.html

Tuesday, July 7, 2015

ಕೃಷಿ

ಈಗೀಗ ಕೃಷಿ ಚಟುವಟಿಕೆಗಳ ಬಗ್ಗೆ, ಕೃಷಿಕರ ಬಗ್ಗೆ ಆಕ್ಟಿವಿಸಂ ಜ್ಯಾಸ್ತಿ ಆಗ್ತಾ ಇದೆ. ಕೃಷಿಕರೇ ಅಲ್ಲದ ಬುಜೀ ಗಳು ಸರ್ಕಾರವನ್ನು ಟೀಕಿಸುವ ಭರದಲ್ಲಿ ತಮಗೆ ತೋಚಿದ್ದನ್ನು ಹೇಳಿಬಿಡುವುದರಲ್ಲಿ ನಿಸ್ಸೀಮರು. ಆದರೆ ಸಮಸ್ಯೆಯ ಆಳಕ್ಕೆ ಇಳಿದು ಯಾರೂ ಮಾತನಾಡುತ್ತಿಲ್ಲ ಎಂದು ನನ್ನ ಭಾವನೆ. ಉದಾಹರಣೆಗೆ ಇತ್ತೀಚಿನ ಕಬ್ಬು ಬೆಳೆಗಾರರ ಸಮಸ್ಯೆ, ಪ್ರತೀ ವರ್ಷವೂ ಇದೆ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೂ ಕಬ್ಬು ಬೆಳೆಯುವ ಕೃಷಿಕರು ಹೆಚ್ಚುತ್ತಲೇ ಇದ್ದಾರೆ. ನನ್ನ ಪ್ರಶ್ನೆ ಇಷ್ಟೇ, ಇಷ್ಟೆಲ್ಲಾ ತೊಂದರೆಗಳಿದ್ದರೂ ಪ್ರತೀ ಬಾರಿಯೂ ಕೃಷಿಕ ಕಬ್ಬನ್ನೇ ಬೆಳೆಯಲು ಆಯ್ದುಕೊಳ್ಳುವುದೇಕೆ? (ನನ್ನ ನಿಲುವಿನಲ್ಲಿ ತಪ್ಪಿದ್ದರೆ ಕ್ಷಮಿಸಿ, ಅಲ್ಪಸ್ವಲ್ಪ ಕೃಷಿಭೂಮಿ ಇದ್ದರೂ ನಾನೇನೂ ಕೃಷಿಕನಲ್ಲ, ಕೃಷಿಕರನ್ನು ತೀರಾ ಹತ್ತಿರದಿಂದ ಬಲ್ಲವನೂ ಅಲ್ಲ, ಆದರೆ ಹಿಂದೆ ಬಾಲ್ಯದಲ್ಲಿ ಚಿಕ್ಕಪ್ಪಂದಿರ ಹಾಗೂ ಇನ್ನಿತರೇ ಸಂಬಂದಿಗಳ ಕೃಷಿಯನ್ನು ನೋಡಿದ್ದಿದೆ, ಅವರ ಕೈ ಜೋಡಿಸಿದ್ದಿದೆ). ಒಬ್ಬ ಜನಸಾಮನ್ಯನಾಗಿ ಈ ಪ್ರಶ್ನೆ ನನ್ನಲ್ಲಿ ಹುಟ್ಟುತ್ತಿದೆ. ನಿಜವಾಗಿಯೂ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲವೇ ಅಥವಾ ಇದರಲ್ಲೂ ಮಾಫಿಯಾ ಇದೆಯಾ?

ಹಾಗೆ ನೋಡಿದರೆ ಕೃಷಿಕರದ್ದೂ ತಪ್ಪು ಇದೆಯಲ್ಲವೇ? ಹಿಂದೆ ನಮ್ಮ ಸಂಬಂಧಿಯೊಬ್ಬರ ಮನೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಹಾಗೆ ಮಾತನಾಡುವಾಗ ಅವರು ತಮ್ಮ ಬಹುಪಾಲು ಹೊಲದಲ್ಲಿ ಅಡಿಕೆ ಹಾಕಿದೆ ಎಂದು ಹೇಳಿದಾಗ ನಂಗೆ ಆಶ್ಚರ್ಯಯಾಯಿತು. ಅದಕ್ಕೂ ಬಹಳ ವರುಷಗಳ ಹಿಂದೆ ಅವರು ತಹೆರೇವಾರಿ ಬೆಳೆಗಳನ್ನು ಬೆಳೆಯುತ್ತಿದ್ದರು, ತರಕಾರಿ, ಭತ್ತ, ಜೋಳ ಹಾಗೂ ಹಣ್ಣುಗಳನ್ನೂ ಬೆಳೆದಿದ್ದಿದೆ.ಕಾರಣ ಕೇಳಿದಾಗ ಅವರು ಹೇಳಿದ್ದು ಇಷ್ಟು, ಬೇರೆ ಬೆಳೆಗಳನ್ನು ಬೆಳೆಯಲು ಸಿಕ್ಕಾಪಟ್ಟೆ ಗಮನ ಹರಿಸಬೇಕು ತುಂಬಾ ಕೆಲಸ, ಹೀಗಾಗಿ ಅಡಿಕೆ ಹಾಕಿ ಬಿಟ್ಟಿದ್ದೇನೆ. ಮೇಲಾಗಿ ಈಗೀಗ ಕೃಷಿ ಕಾರ್ಮಿಕರು ಸಿಗುತ್ತಿಲ್ಲ ಎಂದೂ ಹೇಳಿದರು. ಈ ಕಬ್ಬು ಕೂಡ ಅದೇ ರೀತಿಯದಲ್ಲವಾ? ಹಲವಾರು ಕಳೆ ತೆಗೆಯುವ ಗೋಜಿಲ್ಲ ನೀರು ಹರಿಸುತ್ತಾ ಇದ್ದರಾಯಿತಲ್ಲ ಎಂದೂ ಅಂದರು. ನಾನಿಲ್ಲಿ ಯಾರನ್ನೂ ಹೀಗಳೆಯುತ್ತಿಲ್ಲ ನಾನು ಕೇಳಿದ್ದನ್ನು ನೋಡಿದ್ದನ್ನು ಹಂಚಿಕೊಂಡೆ ಅಷ್ಟೇ.

ಹಿಂದೆ ಬಹುಪಾಲು ಕೃಷಿಕರು ಅನೇಕ ರೀತಿಯ ಬೆಳೆಗಳನ್ನು ಬೆಳೆಯುತ್ತಿದುದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ? ನವಣೆ, ಸಜ್ಜೆ ಯಂತಹ ದ್ಯಾನ್ಯಗಳು ಜನಮಾನಸದಿಂದ ದೂರ ಹೋಗಿಯಾಗಿದೆ. ನಾನೂ ಈ ಧಾನ್ಯಗಳನ್ನು ಬಾಲ್ಯದಲ್ಲಿ ನೋಡಿದ್ದಷ್ಟೇ ನೆನಪು. ಹೀಗಾಗಿ ಕೃಷಿಕರ ಸಮಸ್ಯೆ ಬರೀ ಬೆಂಬಲ ಬೆಲೆ ಕೊಟ್ಟರೆ ಸರಿಯಾಗುವುದಿಲ್ಲ ಎಂದು ನನ್ನ ಭಾವನೆ.

ಇನ್ನೊಂದು ಉದಾಹರಣೆ ಕೊಡ್ತೀನಿ, ನನ್ನ ಒಬ್ಬ ಸ್ನೇಹಿತರಿದಾರೆ, ವಿಜ್ಞಾನಿಯಾದರೂ ಅವರಿಗೆ ಕೃಷಿಯಲ್ಲಿ ತುಂಬಾ ಆಸಕ್ತಿ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಅವರ ತಂದೆಯ ಹೆಗಲುಕೊಟ್ಟು ಕೆಲಸ ಮಾಡುವುದೇ ಅಲ್ಲದೆ, ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡುವುದು ಎಂಬುದರ ಬಗ್ಗೆ ತಮ್ಮ ಇನ್ನಿತರೇ ಸಹೋದ್ಯೋಗಿಗಳ ತೆಲೆ ತಿಂದಾದರೂ ಕೆಲವೊಂದು ಬಹುಮುಖ್ಯ ಸಲಹೆಗಳನ್ನು ಪಡೆಯುತ್ತಾರೆ. ಕೃಷಿ ವಿ ವಿ ಗಳಿಗೆ ಭೇಟಿ ಕೊಟ್ಟು ಅಲ್ಲಿನ ವಿಜ್ಞಾನಿಗಳ ನೂತನ ತಳಿಗಳ ಬಗ್ಗೆಯೋ, ನವೀಕೃತ ಕೀಟ ನಿವಾರಣೆಯಾ ಬಗ್ಗೆಯೋ ತಿಳಿದುಕೊಂಡು ತಮ್ಮ ಹೊಲದಲ್ಲಿ ಅದರ ಪ್ರಯೋಗ ನಡೆಸುತ್ತಾರೆ. ತಮ್ಮ ತಂದೆ ನಡೆಸುತ್ತಿದ್ದ ಪಾರಂಪರಿಕ ಕೃಷಿಯನ್ನೇ ವಿಜ್ಞಾನವನ್ನು ಉಪಯೋಗಿಸಿ ಲಾಭದಾಯಕವಾಗಿ ಬದಲಾಯಿಸಿದ್ದಾರೆ. ಕೆಲವೊಮ್ಮೆ ಇತರರಿಂದ ನಗೆಪಾಟಲಿಗೆ ಗುರಿಯಾದರೂ ಧೃತಿಗುಂದದೆ ಮುನ್ನಡೆಯುತ್ತಿದ್ದಾರೆ. ಹೀಗೆ ಅವರು ತಮ್ಮ ಅನುಭವಗಳನ್ನ ಹೇಳಿಕೊಳ್ಳುವಾಗ, ಒಮ್ಮೆ ಬಾಳೆಗೆ ಔಷದಿ ಸಿಂಪಡಿಸುವ ಹೊಸ ವಿಧಾನವನ್ನು ಅವರ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೇಳಿಕೊಡುತ್ತಾ ಇದ್ದಾಗ, ಅವರ ಕಾರ್ಮಿಕರು ಏನ್ ಸರ್ ಎಷ್ಟು ವರ್ಷದಿಂದ ನಾವು ಈ ಕೆಲಸ ಮಾಡ್ತಿಲ್ಲ ನಮಗೆ ಹೇಳಿಕೊಡೋದಿಕ್ಕೇ ಬರ್ತೀರಲ್ಲ ಎಂದು ಅಂದರಂತೆ. ಆದರೂ ಇವರೂ ಹೊಸ ರೀತಿಯಲ್ಲಿ ಔಷದ ಸಿಂಪಡನೆ ಮಾಡಿಸಿದರಂತೆ. ನನ್ನ ಸ್ನೇಹಿತರ ತಂದೆಗೂ ಇದು ಹಾಸ್ಯಾಸ್ಪದವಾಗಿ ಕಂಡುಬಂತಂತೆ. ಇವರು ಎಲ್ಲ ಕೆಲಸ ತಮ್ಮ ಕಾರ್ಯಸ್ಥಾನಕ್ಕೆ ವಾಪಾಸಾಗಿ ಎರಡು ದಿನವಾದ ಮೇಲೆ ಅವರ ತಂದೆ ಇವರಿಗೆ ಕರೆ ಮಾಡಿ, ಹೊಸ ವಿಧಾನದ ಪ್ರಭಾವವನ್ನು ಹೊಗಳಿದ್ದೇ ಹೊಗಳಿದ್ದು. ಆಮೇಲೆ ಇವರ ಯಾವುದೇ ಯೋಜನೆಗಳಿಗೆ ತಂದೆಯವರು ಪೂರ್ತಿ ಸಹಕಾರವೆಂದು ಹೇಳಬೇಕಿಲ್ಲ ತಾನೇ. ಈ ನಮ್ಮ ಸ್ನೇಹಿತರ ದೆಸೆಯಿಂದ ಕೃಷಿಯನ್ನು ಬಲ್ಲದ ನನ್ನಂತ ಅನೇಕ ಸ್ನೇಹಿತರಿಗೆ ಕೃಷಿ ಪಾಠ ಬಲವಂತದ ಮಾಘಸ್ನಾನವೆನಿಸಿದರೂ ಅದರಿಂದ ತಿಳಿದುಕೊಂಡದ್ದು ಬಹಳ.

ನನ್ನ ಆಕ್ಷೇಪಣೆ ಏನೆಂದರೆ, ಕೃಷಿಯ ಮಹತ್ವವನ್ನು ಜನರಿಗೆ ಹೇಳದೆ ಹಾಗೂ ಸುಧಾರಿತ ಕೃಷಿಯನ್ನು ಮಹತ್ವವನ್ನೂ, ಕೃಷಿಯಲ್ಲಿ ವಿಜ್ಞಾನದ ಮಹತ್ವವನ್ನೂ, ಪಾರಂಪರಿಕ ಹಾಗೂ ಆಧುನಿಕ ಕೃಷಿಯಲ್ಲಿನ ಗುಣ-ದೋಷಗಳನ್ನೂ ಕೃಷಿಕರಿಗೆ ತಿಳಿಸದೇ ಬರಿಯ ಸರ್ಕಾರವನ್ನು ದೋಷಿಯನ್ನಾಗಿಸುವ ಕೆಲವೊಂದು ಬುಜೀಗಳ ದೋರಣೆ ಸರಿಯೇ ಎಂಬುದು.

Sunday, July 5, 2015

ಅವನು

ಅವನು, ನನ್ನ ಅತ್ಯಾಪ್ತ ಸಖ, ಹಾಗಾಗಿ ಭಾರತೀಯ ಎಂದು ಹೆಚ್ಚು ಯೋಚಿಸದೇ ನಿರ್ಧರಿಸಬಹುದು. ತನ್ನ ಲೋಕ ನೋಡುವ ಆಸೆಯ ಮೊದಲ ಮೆಟ್ಟಿಲಾಗಿ ತನ್ನ ದೇಶದಾಚೆಯ ದೊಡ್ಡ ಪಟ್ಟಣವೊಂದರಲ್ಲಿ ನೆಲೆಸಿದ್ದ. ಭಾರತೀಯರಿಗೆ ಇರುವ ಸಹಜ ತೊಂದರೆಯಾದ ಊಟೋಪಚಾರ ಭಿನ್ನತೆಯಿಂದಾಗಿ ತಾನು ತನ್ನ ಅಡುಗೆ ಮಾಡಿಕೊಳ್ಳಲೇಬೇಕಾಗಿತ್ತು. ಅದರಿಂದ ಒಳ್ಳೆಯದೇ ಆಗಿತ್ತು ಬಿಡಿ, ದಿನವೂ ಆ ಹಾಸ್ಟೆಲ್ ನ ಅಡುಗೆ ಕೋಣೆಯಲ್ಲಿ ಎಲ್ಲ ದೇಶಭಾಷೆಯ ಜನರೊಂದಿಗೆ ಒಡನಾಟ ದೊರಕಿತ್ತು. ಜಗತ್ತಿನ ಯಾವುದೇ ಭಾಗದಲ್ಲಿ ಒಬ್ಬ ಭಾರತೀಯ ನೆಲೆಸಿದ್ದಾನೆ ಎಂದಾದಲ್ಲಿ ಇತರರಿಗೆ ಆತನ ಭಿನ್ನತೆಯ ಅರಿವು ಅತೀ ಸುಲಭವಾಗಿ ಆಗುತ್ತೆಯಲ್ಲವೇ? ಇದಕ್ಕೆ ಅವನೇನು ಹೊರತಾಗಿರಲಿಲ್ಲ. ಹೀಗೆ ಅಲ್ಲಿನ ನೆರೆಹೊರೆಯವರ ಜೊತೆ ಅವನ ಜೀವನ ಸಾಗಿತ್ತು. ಅವತ್ತೊಂದು ದಿನ, ಅವನ ಕೋಣೆಯಿಂದ ಮೂರ್ನಾಲ್ಕು ಕೊನೆಯಾಚೆಗಿರೋ ಒಬ್ಬನ ಪರಿಚಯವಾಯಿತು. ಪರಸ್ಪರ ವಿಚಾರ ವಿನಿಮಯಗಳು ಶುರುವಾದವು. ಅವನು ಭಾರತದಿಂದ ಬಂದವನು ಎಂದು ತಿಳಿದಾಕ್ಷಣ ಹೊಸದಾಗಿ ಪರಿಚಯವಾದವನು, ನಿಮ್ ದೇಶದಲ್ಲಿ ಬಾಬರ್ ನ ಜನ ಇಷ್ಟಪಡ್ತಾರಾ? ಎಂದು ಪ್ರಶ್ನೆ ಎಸೆದ. ಅವನು ವಿಚಲಿತನಾಗದೇ, ವಾಗ್ವಾದಕ್ಕಿಳಿಯದೆ ನಿಮ್ಮ ದೇಶಕ್ಕೆ ಪಕ್ಕದ ರಾಷ್ಟ್ರದವನು ದಾಳಿಯಿಟ್ಟಲ್ಲಿ ನೀನು ಅವನನ್ನು ಇಷ್ಟ ಪಡುತ್ತೀಯ ಎಂದು ಮರುಪ್ರಶ್ನೆ ಎಸೆದ! ಅಲ್ಲಿಗೆ ಅವನು ಇನ್ನೊಬ್ಬನಿಗೆ ಹೇಳಬೇಕಾದುದ್ದನ್ನು ಹೇಳಿಯಾಗಿತ್ತೆಂದು ನಾನು ಒತ್ತಿ ಹೇಳಬೇಕಿಲ್ಲವಲ್ಲವೇ.

ಹೀಗೆ ದಿನಗಳು ಕಳೆದು ತಿಂಗಳುಗಳೇ ಸರಿದು ಹೋದವು. ಅವನ ಮತ್ತು ಇನ್ನೊಬ್ಬನ  ಸ್ನೇಹ ಸಂಬಂದ ಗಟ್ಟಿಯಾಗುತ್ತಲೇ ಹೋಯಿತು. ಹೀಗೆ ವಿಚಾರ ವಿನಿಮಯಗಳು ನಡೆದವು, ಸಿನಿಮಾದಿಂದ ಹಿಡಿದು ದೈನಂದಿನ ಜೀವನದ ಕುರಿತು ಉಭಯರಲ್ಲಿ ಚರ್ಚೆಗಳಾದವು. ಬಹುಮುಖ್ಯವಾಗಿ ಅಡುಗೆ ಮಾಡುವಾಗ, ಆ ಇನ್ನೊಬ್ಬ ಮುಖ್ಯ ಪ್ರಶ್ನೆಗಳಲ್ಲಿ ಒಂದು ಆ ನನ್ನ ಸಖನೇಕೆ ಸಸ್ಯಹಾರಕ್ಕೆ ಸೀಮಿತವಾಗಿದ್ದಾನೆ ಎನ್ನುವುದು! ಇವನೂ ಭಾರತೀಯರ ಆಹಾರ ಪದ್ಧತಿಯ ಬಗ್ಗೆ ಹೇಳಿದ, ಭಾರತೀಯರಲ್ಲೂ ಮಾಂಸದ ಅಡುಗೆ ಬಳಸುವವರು ಗಣನೀಯ ಪ್ರಮಾಣದಲ್ಲಿ ಇದ್ದಾರೆ ಆದರೆ ಸಸ್ಯಹಾರಿಗಳೂ ಕೂಡ ಕಡಿಮೆ ಏನಿಲ್ಲ ಅಂದ. ಹೀಗೆಯೇ ಚರ್ಚೆ ಮುಂದುವರೆದಿರಬೇಕಾದರೆ ನೆರೆಹೊರೆಯವ ಮಾಂಸಹಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಾ, ಪ್ರಪಂಚದಲ್ಲಿ ದೇವರು ಸೃಷ್ಟಿ ಮಾಡಿರುವುದೆಲ್ಲ ಮಾನವ ತಿನ್ನುವುದಕ್ಕೆ ಹಾಗಾಗಿ ಮಾಂಸಾಹಾರ ಶ್ರೇಷ್ಠ, ನೀನು ಅದು ಹೇಗೆ ಮಾಂಸವನ್ನು ತಿನ್ನದೇ ಬದುಕಿದ್ದೀಯ ಎಂದ. ಅಷ್ಟರಲ್ಲೇ ಅವನ ಅಡುಗೆ ಮುಗಿದ್ದಿದ್ದರಿಂದ ಮತ್ತೆ ಸಿಗುವ ಎಂದು ವಿದಾಯ ಹೇಳಿ ತನ್ನ ಕೋಣೆಗೆ ಬಂದ.

ಇನ್ನೊಂದು ದಿನ ಏನಾಯಿತು ಅಂದರೆ, ಅದೇ ಆಹಾರ ಪದ್ಧತಿಯ ಬಗ್ಗೆ ಚರ್ಚೆಗಳಾದಾಗ ಅವನು ಭಾರತದಲ್ಲಿ ಅನೇಕ ರೀತಿಯ ದವಸ ಧಾನ್ಯಗಳೂ, ತರಕಾರಿ ಸೊಪ್ಪು-ಸದೆಗಳೂ ದಂಡಿಯಾಗಿ ಸಿಗುವುದರಿಂದ ಮಾಂಸವನ್ನೇ ತಿಂದು ಬದುಕಬೇಕು ಎಂಬ ದರ್ದು ಅನೇಕರಿಗೆ ಇಲ್ಲ, ಹಾಗೆ ನೋಡಿದರೆ ಭಾರತೀಯರು ಮಾಂಸವನ್ನೇ ಮುಖ್ಯ ಆಹಾರವಾಗಿ ಸೇವಿಸುವುದು ಕಡಿಮೆ ಎಂದೂ ಹೇಳಿದ. ಆಗ ಆ ನೆರೆಹೊರೆಯವ ಇವನಿಗೆ ನೀನು ಯಾವತ್ತೂ ಮಾಂಸವನ್ನು ತಿನ್ನಲು ಇಷ್ಟ ಪಡುವುದಿಲ್ಲವೇ ಎಂದೂ, ಅದು ಹ್ಯಾಗೆ ಸಾಧ್ಯ ಎಂದೂ ಆಶ್ಚರ್ಯ ವ್ಯಕ್ತ ಪಡಿಸಿದಾಗ, ಇವನು ನಿನಗೆ ಯಾವ ಪ್ರಾಣಿಯ ಮಾಂಸವಾದರೂ ಸರಿಯೇ ಎಂದು ಮರುಪ್ರಶ್ನೆ ಹಾಕಿದಾಗ ಆತ ಸಾವರಿಸಿಕೊಂಡು ಇಲ್ಲ ಇಲ್ಲ ನಾನು ಹಂದಿಯ ಮಾಂಸವನ್ನು ಮುಟ್ಟುವುದೇ ಇಲ್ಲ ಎಂದ. ಎದುರಾಳಿಯು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದ ಎಂದು ಗೊತ್ತಾಗುತ್ತಿದ್ದಂತೆಯೇ ಅವನು “ಗೊತ್ತಾಯಿತೇ, ನಿನಗೆ ಹ್ಯಾಗೆ ಹಂದಿಯ ಅಥವಾ ಇನ್ಯಾವುದೋ ಪ್ರಾಣಿಯ ಮಾಂಸ ನಿಂಗೆ ಇಷ್ಟವಿಲ್ಲವೋ, ನೀನು ತಿನ್ನುವುದಿಲ್ಲವೋ, ಹಾಗೆಯೇ ನಾನೂ ಮಾಂಸ ತಿನ್ನುವುದನ್ನು ಇಷ್ಟ ಪಡುವುದಿಲ್ಲ ಹಾಗೂ ತಿನ್ನಲೂ ಇಷ್ಟ ಪಡುವುದಿಲ್ಲ”. ಅದು ಅವನಿಗೆ ನಾಟಿತು ಎಂದು ತೋರಿತು. ಹಾಗೆಯೇ ಚರ್ಚೆ ಮುಂದುವರೆಯಿತು, ಭಾರತೀಯರಲ್ಲಿ ಗಣನೀಯರು ಸಸ್ಯಾಹಾರಿಗಳು ಅದೂ ಇದೂ ಎಂಬ ವಿಷಯಗಳ ಮೇಲೆ. ಇಷ್ಟೆಲ್ಲಾ ಆದಮೇಲೆ, ಸಮಯವಾಯಿತೆಂದು ತಮ್ಮತಮ್ಮ ಕೋಣೆಗಳಿಗೆ ಹೋದರು.

ಮರುದಿನ, ಮತ್ತೆ ಇಬ್ಬರ ಭೇಟಿ ಅದೇ ಅಡುಗೆಮನೆಯಲ್ಲಿ. ಇವನು ಅಡುಗೆ ಮಾಡ್ತಾ ಇದ್ದ, ಇದ್ದಕ್ಕಿದ್ದಂತೆ ಭಾರತೀಯರು ಗ್ರೇಟ್ ಅಂದುಬಿಡೋದೇ, ಅವನಿಗೆ ಆಶ್ಚರ್ಯವಾಗಿ ಯಾಕೆ ಅನ್ನಲು “ಸಸ್ಯಹಾರಿಗಳಲ್ಲವ ಅಂದ”. ವಿಚಾರ ಮಾಡಿ ನೋಡಿದಾಗ ನೆರೆಹೊರೆಯವ ಹಿಂದಿನ ದಿನ ನಡೆದ ಚರ್ಚೆಯ ನಂತರ ಕೊನೆಗೆ ಹೋಗಿ ಸ್ವಲ್ಪ ಸಸ್ಯಾಹಾರದ ಬಗ್ಗೆ ಸಂಶೋಧನೆ ನಡೆಸಿದ ವಿಚಾರ ತಿಳಿಯಿತು. ಅವನು ಮುಂದುವರೆದು ಛೆ!! ನನಗೀಗ ಕೋಳಿಗಳ ಬಗ್ಗೆ ಮರುಕ ಹುಟ್ಟುತ್ತಿದೆಯೆಂದ. ಒಂದೇ ದಿನದಲ್ಲಿ ಎಷ್ಟೊಂದು ಬದಲಾವಣೆ? ಇವನಿಗೆ ಅಚ್ಚರಿಯ ಜೊತೆಗೆ ಸ್ವಲ್ಪ ಅಹಂ ಕೂಡ ಹುಟ್ಟಿದ್ದು ಮಾತ್ರ ನಿಜ! 

-*-*-*-*-*-*-*-*-

Saturday, May 16, 2015

ಬಾಳೆ ಮಹಾತ್ಮೆ

ಕೆಲವೊಮ್ಮೆ ನಮ್ಮ ಕನ್ನಡ ಭಾಷೆಯ ಬಗ್ಗೆ ಹೇಳುವಾಗ, ಬಾಳೆಹಣ್ಣಿನ ಉಪಮೆ ಬಳಸುವುದನ್ನು ಕೇಳಿದ್ದೆ. ಆದರೆ ಬಾಳೆಹಣ್ಣಿನ ಮಹಾತ್ಮೆ ಈಗೀಗ ಗೊತ್ತಾಗ್ತಾ ಇದೆ. ಏನೇ ಹೇಳಿ ಹಣ್ಣುಗಳಲ್ಲೇ ಬಾಳೆಯೇ ಶ್ರೇಷ್ಠ, ಭಗವಂತನಿಗೂ ಬಾಳೆಹಣ್ಣಿನ ನೈವೇದ್ಯವೇ ಬೇಕು ಅನ್ನುವುದರಲ್ಲೇ ಊಹಿಸಬಹುದು ಅದರ ಮಹಾತ್ಮೆ. ಬಾಳೆಯ ಸವಿಯನ್ನು ಅರಿತವನೇ ಧನ್ಯ ಎಂದು ನನ್ನ ಭಾವನೆ.

ಇದ್ಯಾಕಪ್ಪಾ ಎಲ್ಲಾ ಬಿಟ್ಟು ಬಾಳೆಯ ಬಗ್ಗೆ ಇಷ್ಟೊಂದು ಪ್ರೀತಿ ಹುಟ್ಟಿತು ನನಗೆ ಅಂತ ತಬ್ಬಿಬ್ಬಾಗಬೇಡಿ. ಅನೇಕ ತಿಂಗಳಿನಿಂದ ಅದೆಷ್ಟೋ ಬಗೆಯ ಹಣ್ಣುಗಳನ್ನು ತಂದು ತಿನ್ನುವ ಪ್ರಯತ್ನ ಮಾಡುತ್ತಿದ್ದೆ. ಮಿರಿ ಮಿಂಚುವ ತಹೆರೇವಾರಿ ಸೇಬುಗಳಿಂದ ಹಿಡಿದು, ಕಿತ್ತಳೆ, ದ್ರಾಕ್ಷಿ, ಮೂಸಂಬಿ ಇನ್ನೇನೋ ಹೆಸರೇ ಗೊತ್ತಿರದ ಹಣ್ಣುಗಳನ್ನೂ ಕೊಂಡು ತಂದೆ. ಆದರೆ ಅನೇಕಬಾರಿ ಯಾವ ಹಣ್ಣನ್ನು ಸರಿಯಾಗಿ ಆಸ್ವಾದಿಸಿ ತಿನ್ನಲು ಆಗಲೇ ಇಲ್ಲ. ನನ್ನ ಮೇಜಿನ ಮೇಲೆ ಅವುಗಳು ಹಾಳಾಗುವುದನ್ನು ನೋಡದೆ ಅನೇಕ ಬಾರಿ ತಿನ್ನಬೇಕಾಯಿತು. ಆದರೆ ಈ ಬಾಳೆಹಣ್ಣು ಇದೆಯಲ್ಲ ಅದು ಹಾಗಲ್ಲ, ನಾನು ಎಷ್ಟು ಬೇಡ ಬೇಡ ಅಂದರೂ ನನ್ನ ಬಾಯಿ ಹಾಗೋ ಕೈ ಗಳು ತಮ್ಮ ತಮ್ಮಲ್ಲಿ ಮಸಲತ್ತು ನಡೆಸಿ ಅದ್ಯಾವ ಮಾಯೆಯಲ್ಲೋ ಬಾಳೆಯೊಂದನ್ನು ಗುಳುಂ ಮಾಡಿದ್ದಿದೆ. ಅದೇನೇ ಇರಲಿ ನಿಜವಾಗಿಯೂ ಹಣ್ಣುಗಳ ರಾಜ ಎಂಬ ಪದವಿ ಬಾಳೆಹಣ್ಣಿಗೆ ದಕ್ಕಬೇಕಿತ್ತು. ಆದರೆ ಬಾಳೆ ಬಡವರ ಹಣ್ಣಾಗಿದ್ದರಿಂದ ಇತರೆ ಹಣ್ಣುಗಳು ಅದನ್ನು ತುಳಿದು ಹಾಕಿಬಿಟ್ಟವು ಎಂಬುದು ನನ್ನ ಅಭಿಪ್ರಾಯ. ನೀವೇ ಯೋಚಿಸಿ, ಬಾಳೆಯೊಂದನ್ನು ತಿನ್ನುವುದು ಅದೆಷ್ಟು ಸುಲಭ, ಒಂದೀಡಿ ಹಣ್ಣೊಂದನ್ನು ಚಿಟಿಕೆ ಹೊಡೆಯುವುದರಲ್ಲಿ ತಿಂದು ಮುಗಿಸಬಹುದು. ತಿನ್ನುವಾಗ ಆಗುವ ಆನಂದ ತಿಂದವನಿಗೇ ಗೊತ್ತು, ಆಹಾ ಅದೇನೋ ಸ್ವಾದ. ತಿಂದ ಮೇಲೆ ಅದೇನೋ ಒಂದು ತೃಪ್ತಿ. ಹಣ್ಣನ್ನು ತೊಳೆಯಬೇಕಿಲ್ಲ, ಸಿಪ್ಪೆ ಕಪ್ಪಾಗಿದೆಯಲ್ಲ ಎಂದು ಮರುಗಬೇಕಿಲ್ಲ. ಹೊರಗಡೆ ಹ್ಯಾಗಿದ್ದರೇನು ಒಳಗಿನ ತಿರುಳು ಮಾತ್ರ ಅದ್ಭುತ! ಆದರೆ ಬೇರೆ ಹಣ್ಣುಗಳದ್ದು ಹಾಗಲ್ಲ. ಕೆಲವೊಮ್ಮೆ ನೋಡಲಿಕ್ಕೆ ತುಂಬಾ ಚೆನ್ನಾಗಿರುವ ದ್ರಾಕ್ಷಿ, ಮಾವು ಒಳಗೆ ಹುಳಿಯಾಗಿರುವ ಸಂಭವವೇ ಹೆಚ್ಚು! ಇನ್ನೂ ಕಿತ್ತಳೆ-ಮೂಸಂಬಿಯ ವಿಚಾರ ಜಾಸ್ತಿ ಹೇಳುವ ಅವಶ್ಯಕತೆಯೇ ಇಲ್ಲ. ಆಮೇಲೆ ಹಲಸು, ಯಾರಾದರೂ ತೊಳೆ ತೆಗೆದುಕೊಟ್ಟರೆ ತಿನ್ನಬಹುದು. ಆಮೇಲೆ ಪರಂಗಿ/ಪಪ್ಪಾಯ, ಕರಭೂಜ ತಿನ್ನಲು ವಿಶೇಷ ತಯಾರಿ ಮಾಡ್ಕೊಬೇಕು. ಇಷ್ಟೆಲ್ಲಾ ಗುಣಗಳಿರೋ ಬಾಳೆಹಣ್ಣನ್ನು ಯಾಕೆ ನಾವು ಹಣ್ಣುಗಳ ರಾಜ ಅನ್ನಬಾರದು ಅಂತಾ? ಇನ್ನೊಂದು ಬಹು ಮುಖ್ಯವಾದ್ದು ಮರ್ತೆ ಬಿಟ್ಟೆ, ಬಾಳೆಹಣ್ಣು ಜಾಸ್ತಿ ಹಣ್ಣಾಗಿ ಹೋಗಿಬಿಟ್ಟಿದೆ ಅಂತ ಮರುಗಬೇಕಾಗಿಯೂ ಇಲ್ಲ ಮತ್ತೆ ನೂರಕ್ಕೆ ೯೦ರಷ್ಟು ಬಾರಿ ನಮಗೆ ಭ್ರಮನಿರಸನ ಗೊಳಿಸುವುದಿಲ್ಲ!! ಅಲ್ವೇ??

ಬಾಳೆಹಣ್ಣಿನ ಬಗ್ಗೆ ಇಷ್ಟೆಲ್ಲಾ ಹೆಮ್ಮೆ ಪಟ್ಟ ನನಗೆ ಹಾಗೆ ಒಂದು ಬಾರಿ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಮನಸಾಗಿ, ವಿಕಿಪೀಡಿಯ ತೆರೆದೆ. ಹಾಗೇ ನೋಡುತ್ತಾ ಇರುವಾಗ ಒಂದು ವಿಷಯ ಗಮನಿಸಿದೆ, ಇಡೀ ವಿಶ್ವದ ೧೮ ಪ್ರತಿಶತವನ್ನು ನಮ್ಮ ದೇಶದಲ್ಲಿ ಬೆಳೆಯುತ್ತಾರಂತೆ ಆದರೆ, ನಮ್ಮ ರಪ್ತು ಪ್ರಮಾಣ ನಗಣ್ಯ. ಅದೇ ರೀತಿ, ಜಗತ್ತಿನ ಬರಿಯ ೫ ಪ್ರತಿಶತ ಉತ್ಪಾದನಾ ಪಾಲನ್ನು ಹೊಂದಿರುವ ಇಕ್ವೆಡಾರ್ ರಪ್ತಿನ ವಿಷಯಕ್ಕೆ ಬಂದಾಗ ಮೊದಲ ಸ್ಥಾನದಲ್ಲಿ ಇದೆ. ಅದು ತನ್ನ ಉತ್ಪಾದನೆಯ ೭೦ ಪ್ರತಿಶತವನ್ನು ಇತರೆ ದೇಶಗಳಿಗೆ ರಪ್ತು ಮಾಡುತ್ತದಂತೆ (೨೦೧೨ ರ ದತ್ತಾಂಶ). ಇದರಲ್ಲೇ ಗೊತ್ತಾಗುತ್ತೆ ನಾವು ಕೃಷಿ ಮಾರುಕಟ್ಟೆಯನ್ನು ಅದೆಷ್ಟು ಕಡೆಗಣಿಸಿದ್ದೇವೆ ಎಂದು. ನಮ್ಮ ಭಾರತ ವಿಶ್ವಗುರುವಾಗಬೇಕಾದರೆ ಕೃಷಿ ಮಾರುಕಟ್ಟೆಯೊಂದೇ ಸಾಕು. ನಾವು ಏನೇನು ಬೆಳೆಯೋಲ್ಲ! ನಮಗೆ ನಮ್ಮ ಸಾಮರ್ಥ್ಯ ತಿಳಿದಿಲ್ಲ. ವಿಶ್ವದ ಅನೇಕ ರಾಷ್ಟ್ರಗಳು, ಮಾನವ ಸಂಪನ್ಮೂಲ ಇಲ್ಲವೇ ಕೃಷಿಗೆ ಯೋಗ್ಯ ವಾತಾವರಣ ಇಲ್ಲದೆ ಪರಿತಪಿಸುತ್ತಾ ಇರುವಾಗ ಈ ಎರಡು ವಿಪುಲವಾಗಿ ಇರುವ ನಾವು ಬಹುಮುಖ್ಯ ಕ್ಷೇತ್ರವೊಂದನ್ನು ಕಡೆಗಣಿಸಿದ್ದೆವೆಯೇ???