Wednesday, December 24, 2014

ನಮ್ಮ ಸರ್ಕಾರಿ ಸಂಶೋಧನಾ ಸಂಸ್ಥೆಗಳು!!

ಇವತ್ತು ಒಂದು ಸಂಪಾದಕೀಯ ಓದಿದೆ (http://epapervijayavani.in/Details.aspx?id=17975&boxid=1499986) ವಿಜಯವಾಣಿಯಲ್ಲಿ, ನಮ್ಮ ಸೇನೆಯ ಸ್ಥಿತಿ ನಿಜವಾಗಿಯೂ ದುರದೃಷ್ಟಕರ. ಇದರ ಬಗ್ಗೆ ನಮ್ಮ ಸರ್ಕಾರ ಗಮನಹರಿಸಲೇ ಬೇಕು. ಸಂಸತ್ತಿನ ಸ್ಥಾಯಿ ಸಮಿತಿ ಹೇಳಿದ ಹಾಗೆಯೇ, ನಮ್ಮಲ್ಲಿ ಇರುವ ರಕ್ಷಣಾ ಸಂಶೋಧನಾ ಸಂಸ್ಥೆಗಳು ನಿಜವಾಗಿಯೂ ಬಿಳಿಯಾನೆಗಳಾಗಿವೆ. ಅಲ್ಲಿರೋರಲ್ಲಿ ಮಾಡ್ತಾ ಇರೋದು ಏನು? ನಿಜವಾಗಿಯೂ ಬೇಸರ ಆಗುತ್ತೆ, ಸಾಮರ್ಥ್ಯ ಇಲ್ಲದವರು ಇವತ್ತು ಈ ಥರ ಇರೋ ಸಂಶೋಧನಾ ಸಂಸ್ಥೆಗಳಲ್ಲಿ ತುಂಬಿ ತುಳುಕುತ್ತಾ ಇರೋದಿಕ್ಕೆ ಇವತ್ತು ನಮ್ಮ ದೇಶದ ಕೆಲವೊಂದು ವಿಭಾಗಗಳು ರೋಗಗ್ರಸ್ಥವಾಗಿರೋದು. ಈ ಸಂಶೋಧನ ವಲಯ ಒಂದು ದೊಡ್ಡ ರಾಜಕೀಯ, ಅಲ್ಲಿ ಒಂದು ತಾತ್ಕಾಲಿಕ ಕೆಲಸ ಸಿಗೊದಕ್ಕೂ ನಿಮಗೆ ಯಾರದ್ದೋ ದೊಡ್ಡ ತೆಲೆಯ ಶಿಫಾರಸ್ಸು ಬೇಕಾಗಿದೆ. ಕೆಲವೊಂದು ಸಲ ಈ ವಿಜ್ಞಾನಿಗಳು ರಾಜಕಾರಣಿಗಳನ್ನು ಟೀಕಿಸುವುದುಂಟು, ಆದರೆ ಕೆಲವೊಂದು ವಿಜ್ಞಾನಿಗಳು ಈ ರಾಜಕಾರಣಿಗಳಿಗಿಂತ ನಾಲಾಯಕ್ ಆಗಿರುತ್ತಾರೆ. ಇವತ್ತಿನ ದಿನ ಈ ಶಿಫಾರಸ್ಸು ಪತ್ರ ಅನ್ನೋ ಒಂದು ವಿಷಯ ಹಿಡಿದುಕೊಂಡು ಎಷ್ಟು ಜನ ಅಮಾಯಕರ ಜೀವನ ಹಾಳು ಮಾಡಿಲ್ಲ? ತಮ್ಮ ಕೆಲವು ನಾಲಾಯಕ್ ವಿದ್ಯಾರ್ಥಿಗಳಿಗೆ ಒಳ್ಳೆಯ ಆಯಕಟ್ಟಿನ ಜಾಗ ಕೊಟ್ಟಿಲ್ಲ. ಇಂತಹ ಕೆಲವೊಂದು ಜನರಿಂದ ಬೇಸತ್ತ ನಮ್ಮ ಪ್ರತಿಭಾನ್ವಿತ ಜನ ವಿದೇಶಗಳಲ್ಲೇ ಇರೋ ಯೋಚನೆ ಮಾಡಿಬಿಡ್ತಾರೆ. ನಿಮಗೆ ನಮ್ಮ ಭಾರತದಲ್ಲಿ ಒಳ್ಳೆ ಕೆಲಸ (ವಿಜ್ಞಾನಿ, ಪ್ರಾಧ್ಯಾಪಕ ಇತ್ಯಾದಿ) ಸಿಗಬೇಕಂದ್ರೆ ನೀವು ಪ್ರತಿಭಾನ್ವಿತರಲ್ಲದೇ ಇದ್ರೂ ನಡೆಯುತ್ತೆ ಒಂದು ದೊಡ್ಡ ವಿಶ್ವವಿದ್ಯಾಲಯದ ಹೆಸರು, ದೊಡ್ಡ ಮನುಷ್ಯನ (ಪ್ರೊಫೆಸರ್ಗಳು) ಕೃಪಾಕಟಾಕ್ಷ ಇರಲೇ ಬೇಕು. ಇಲ್ಲ ಅಂದ್ರೆ ನಿಮ್ಮನ್ನ ಮೂಸಿಯೂ ನೋಡೋಲ್ಲ.

ಇನ್ನೂ, DRDO ವಿಷಯಕ್ಕೆ ಬರೋಣ, ನಮ್ಮ ದೇಶದಲ್ಲಿ ಹಲವಾರು DRDO ಸಂಬಂದಪಟ್ಟ ಪ್ರಯೋಗಾಲಯಗಳಿವೆ. ಕೆಲವೊಂದು ತುಂಬಾ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇವೆ, ಆದರೆ ಕೆಲವೊಂದರಲ್ಲಿ ಅದೇನು ಮಾಡ್ತಾರೋ ಮಹಾನುಭಾವರು ಗೊತ್ತೇ ಆಗೋಲ್ಲ. ಯಾರನ್ನೂ ತಮ್ಮ ಹತ್ರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಸಾರ್ವಜನಿಕರಿಗಂತೂ ಪ್ರವೇಶ ಕೊಡುವ ಮಾತೇ ಇಲ್ಲ ಬಿಡಿ.

ನನ್ನ ಸ್ನೇಹಿತನೊಬ್ಬ ಹೇಳಿದ ಸಂಗತಿ ಇದು. ಅವನ ಸ್ನೇಹಿತನೊಬ್ಬ ಒಂದು ಸಂಶೋಧನಾ ಸಂಸ್ಥೆಯಲ್ಲಿ ಕಿರಿಯ ವಿಜ್ಞಾನಿಯಾಗಿ ಸೇರಿಕೊಂಡಿದ್ದ. ಹೀಗೆ ಇಬ್ಬರೂ ಒಂದು ಸಲ ಮಾತಿಗೆ ಸಿಕ್ಕಾಗ, ಲೋಕಾರೂಡಿಯಂತೆ ನನ್ನ ಸ್ನೇಹಿತ ಅವನನ್ನು ಕೆಲಸದ ಬಗ್ಗೆ ಕೇಳಿದ್ದಾನೆ. ಆಗ ಅವನು, ಏನೂ ಮಾಡ್ತಾ ಇಲ್ಲ ಕಣೋ, ಬರ್ತೀನಿ, ನಂಗೆ ಕೂರಲಿಕ್ಕೆ ಸರಿಯಾದ ಕಚೇರಿಯೂ ಇಲ್ಲ, ಅಲ್ಲಿ-ಇಲ್ಲಿ ಓಡಾಡ್ತೀನಿ, ೫-೬ ಸಲ ಕಾಫಿ, ಮಧ್ಯಾನದ ಊಟ ಹೀಗೆ ಕಾಲ ಕಳೆಯುತ್ತೆ, ವಾಪಾಸ್ ಬರ್ತೀನಿ ಅಂತ ಅಂದನಂತೆ. ಇಲ್ಲಿ ಅವನ ತಪ್ಪೂ ಇದೆ, ಆದರೆ ಅವನೊಬ್ಬ ಕಿರಿಯ ವಿಜ್ಞಾನಿ, ತನ್ನ ಹಿರಿಯರು ಏನು ಮಾಡ್ತಾರೋ ಅದನ್ನೇ ಮಾಡ್ತಾನೆ ಅಷ್ಟೇ. ನಮ್ಮಲ್ಲಿ ಕಿರಿಯರನ್ನು ತಿದ್ದಿ ಮುನ್ನೆಡೆಸುವವರು ಕಡಿಮೆ. ನಾನು ಯಾಕೆ ಹೇಳಿಕೊಡಬೇಕು, ನನಗೇನು ಲಾಭ ಅದರಿಂದ ಅನ್ನೋದೇ ಜಾಸ್ತಿ. ಅವನೇ ಇನ್ನೊಂದು ವಿಷ್ಯ ಹೇಳಿದನಂತೆ, ಇಲ್ಲಿ ಒಂದು ಉಪಕರಣ ಇದೆ ಕಣೋ, ಅದು ಕೆಲಸಮಾಡಲಿಕ್ಕೆ ತಯಾರಿಯಾಗಬೇಕು (like to warm up, to reach required operating parameters etc) ಅಂದ್ರೆ ೪-೫ ಗಂಟೆ ಆಗುತ್ತೆ. ದಿನ ಒಬ್ಬರು ಬಂದು ಒಂದು ಹತ್ತು ಗಂಟೆ ಸುಮಾರಿಗೆ ಅದನ್ನ ಚಾಲೂ ಮಾಡ್ತಾರೆ. ೩-೪ ಗಂಟೆ ಅಷ್ಟೊತ್ತಿಗೆ ಎಲ್ಲ ಸರಿಯಾಗಿ ಬೇಕಾಗಿರೋ ಪ್ರಯೋಗವೋ ಇನ್ನೊಂದೋ ಮಾಡಲಿಕ್ಕೆ ತಯಾರಾಗುತ್ತೆ. ಆದರೆ ಇನ್ನೇನು ೪ ಗಂಟೆ ಆಗಿರುತ್ತೆ, ಅದಕ್ಕೆ ಇನ್ನೊಂದು ಗಂಟೇಲಿ ಏನ್ ಮಾಡೋಕೆ ಆಗುತ್ತೆ ಅಂತ ಯೋಚಿಸಿ ಅದನ್ನ ಬಂದ್ ಮಾಡಿ ಹೋಗ್ತಾರೆ. ಇದು ನಿಜವೋ ಸುಮ್ನೆ ಆಡಿಕೊಳ್ಳಲು ಹೇಳಿದ್ದೋ ಗೊತ್ತಿಲ್ಲ. ಆದರೆ ನಮ್ಮ ಸರ್ಕಾರಿ ಕೆಲಸಗಾರರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ!!   

Saturday, December 20, 2014

ಶಿಕ್ಷಣ ಮಾಧ್ಯಮದ ವಿಚಾರ!

ಕನ್ನಡ ಮಾಧ್ಯಮದಲ್ಲಿ ಓದಬೇಕು ಸರಿ. ಆದರೆ ಅದಕ್ಕೆ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ ಅನ್ನೋದು ಮೊದಲು ಯೋಚಿಸಬೇಕಾಗಿದೆ! ಸರಿ ಸರ್ಕಾರ ನಾಳೆಯಿಂದಲೇ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಅಂತ ಒಂದು ಆದೇಶ ಹೊರಡಿಸುತ್ತೆ ಅಂತ ಇಟ್ಕೊಳ್ಳಿ. ಅದಕ್ಕೆ ತಕ್ಕಹಾಗೆ ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ, ಕನ್ನಡದಲ್ಲಿ ಸರಿಯಾಗಿ ಪಾಠ ಮಾಡೋ ಶಿಕ್ಷಕರು ಇದಾರ ನಮ್ಮಲ್ಲಿ? ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಆಕರ ಗ್ರಂಥಗಳು ಇವೆಯೇ? ಕನ್ನಡ ಮಾಧ್ಯಮದಲ್ಲಿ ಓದೋದು ಅಂದ್ರೆ ಬರೀ ಸಾಹಿತ್ಯವನ್ನೇ ಕಲಿಯೋದು ಅಲ್ಲ ತಾನೇ? ನಿಜವಾಗಿಯೂ ನಮ್ಮ ಪರಿಸ್ಥಿತಿ ನೋಡಿ ಬೇಸರ ಆಗುತ್ತೆ. ಪಕ್ಕದ ಆಂದ್ರದಲ್ಲಿ  ಪ್ರಥಮದರ್ಜೆ ಕಾಲೇಜಿನಲ್ಲೂ ತೆಲುಗು ಮಾಧ್ಯಮದಲ್ಲೇ ವಿಜ್ಞಾನವನ್ನು ಕಲಿಸಿಕೊಡ್ತಾ ಇದಾರೆ. ನಮ್ಮಲ್ಲಿ ನಾವು ಪಿಯುಸಿಯನ್ನೂ ಸಹ ಆಂಗ್ಲದಲ್ಲೇ ಕಲೀಬೇಕಾಗಿದೆ (ವಿಜ್ಞಾನ ವಿಭಾಗ).

ನಿಜವಾಗಿಯೂ ನಾವು ಮಾಡುತ್ತಿರುವುದು ಸರಿಯೇ? ನಮ್ಮ ಭಾಷೆಯನ್ನು ಬಳಸದೇ ಆಂಗ್ಲ ಭಾಷೆಗೆ ಒಗ್ಗಿಕೊಂಡಿರುವ ಫಲ ಏನು? ನನ್ನ ಪ್ರಕಾರ ಇದರಿಂದ ನಮ್ಮ ದೇಶಕ್ಕೆ ಆದ ಉಪಯೋಗ ತೀರ ಕಮ್ಮಿ. ನಮ್ಮ ಶಿಕ್ಷಣ ಮಾಧ್ಯಮದ ಫಲವಾಗಿ ಇಂದು ನಮ್ಮ ಪ್ರತಿಭಾನ್ವಿತ ಜನ ಬೇರೆ ದೇಶಕ್ಕೆ, ಅದರ ಒಳಿತಿಗೆ  ದುಡೀತಾ ಇದಾರೆ ಅಷ್ಟೇ. ಐ ಟಿ ಕೂಲಿಗಳ ಸೃಷ್ಟಿಯಾಗ್ತಾ ಇದೆ ಅಷ್ಟೇ. ನಿಜವಾಗಿಯೂ ನಾವು ಮುಂದುವರೆಯುತ್ತಾ ಇದೀವಾ? ಮುಂದುವರೆಯಲಿಕ್ಕೆ, ಅಭಿವೃದ್ಧಿಹೊಂದಲಿಕ್ಕೆ ಆಂಗ್ಲ ಮಾಧ್ಯಮವೇ ಬೇಕಾ? ಹಾಗೆ ನೋಡೋದಾದರೆ, ಬಹುತೇಕ ಯುರೋಪಿಯನ್ ರಾಷ್ಟ್ರಗಳಲ್ಲಿ, ಅವರ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ. ಆದರೆ ಅಲ್ಲಿನ ಜನಜೀವನ ಮಟ್ಟ ಉನ್ನತವಾಗಿಲ್ಲವೇ? ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿಲ್ಲವೇ? ನೀವು ನಂಬ್ತೀರೋ ಬಿಡ್ತೀರೋ, ಬಹುತೇಕ ಯುರೋಪಿಯನ್ ಪ್ರಜೆಗಳು ಒಂದೇ ಒಂದು ಆಂಗ್ಲ ಪದದ ಅರ್ಥವನ್ನು ಹೇಳಲು ಶಕ್ಯರಲ್ಲ. ಜನಸಾಮಾನ್ಯರನ್ನು ಒಂದೆಡೆ ಸರಿಸಿ, ಕಾಲೇಜು ಪ್ರಾದ್ಯಾಪಕರು, ವೈದ್ಯರು ಹಾಗೂ ಇನ್ನಿತರೇ ಉನ್ನತ ವ್ಯಾಸಂಗ ಮಾಡಿರೋ ಜನರೂ ಸಹ ಆಂಗ್ಲ ಭಾಷೆಯಲ್ಲಿ ಮಾತನಾಡಲಾರರು. ಇದರರ್ಥ ಅವರಿಗೆ ಏನು ತಿಳಿದಿಲ್ಲ ಎಂದಲ್ಲ. ನಮಗಿಂತ ಸಾವಿರ ಪಾಲು ಹೆಚ್ಚಿನ ಜ್ಞಾನ ಅವರಿಗಿದೆ. ಭಾರತವೊಂದೆ ಅನಿಸುತ್ತೆ ವಸಾಹತುಶಾಯಿ ಪಳೆಯುಳಿಕೆಯಾದ ಆಂಗ್ಲ ಭಾಷೆಯನ್ನು ಅಪ್ಪಿಕೊಂಡಿರುವುದು. ಛೆ! ಎಷ್ಟು ಮುಜುಗರ ಆಗುತ್ತೆ!

ಇದಕೆಲ್ಲಾ ಕಾರಣ ಏನು? ನಮ್ಮ ಭಾಷೆಯ ಕಡೆಗೆ ನಮಗಿರೋ ದಿವ್ಯ ನಿರ್ಲಕ್ಷವೇ? ಖಂಡಿತ ಅಲ್ಲ!! ನಮ್ಮನ್ನು ಆಂಗ್ಲದೆಡೆಗೆ ತಳ್ಳಿದ ನಮ್ಮ ಹಳೆಯ ತೆಲೆಗಳು. ಭಾಷೆಯ ಉದ್ಧಾರವೆಂದರೆ ಬರೀ ಸಾಹಿತ್ಯ ಸೃಷ್ಟಿ ಎಂದು ನಮ್ಮನ್ನು ತಪ್ಪು ದಾರಿಗೆ ತಳ್ಳಿದ ಕೆಲವು ಜನ. ಕನ್ನಡ ಕನ್ನಡ ಎಂದು ಬಡಿದುಕೊಂಡರೆ ಏನೂ ಉಪಯೋಗ ಇಲ್ಲ, ಕನ್ನಡವನ್ನು ಜನಜೀವನ ದಲ್ಲಿ ಬಳಸಬೇಕು. ಎಲ್ಲೆಲ್ಲೂ ಕನ್ನಡ ಇರಬೇಕು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಸಾಹಿತ್ಯ ಎಲ್ಲದರಲ್ಲೂ ಕನ್ನಡ ಇರಬೇಕು. ನಮ್ಮ ಕನ್ನಡ ಸಾಹಿತ್ಯ ಉತ್ಕೃಷ್ಟವಾಗಿದೆ ಅದಕ್ಕೆ ಕಾರಣಕರ್ತರು ಕನ್ನಡದ ಕವಿಗಳು. ಅವರ ಕೆಲಸ ಅವರು ಮಾಡಿದ್ರು. ಆದರೆ ಇನ್ನಿತರೇ ಕ್ಷೇತ್ರಗಳು ಕನ್ನಡವನ್ನು ಅಸ್ಪೃಶ್ಯದ ತರ ನೋಡಿದ್ದಕ್ಕೆ ಕಾರಣ ಏನು? ನಿಜವಾದ ದಲಿತ ಅಂದರೆ ಅದು ನನ್ನ ಕನ್ನಡ ಭಾಷೆ. ಶತಮಾನಗಳಿಂದ ತುಳಿಯುತ್ತಲೇ ಬಂದ ಸಮಾಜದಲ್ಲಿ ಕಲಿತವರು ಎಂಬ ಉನ್ನತ ವರ್ಗವೇ ಇದಕ್ಕೆ ಕಾರಣ ಎಂದು ನನ್ನ ಭಾವನೆ.

ನಮ್ಮ ದೇಶದ ಜನರೇ ವಿಚಿತ್ರ, ಸ್ವಲ್ಪ ಓದಿಕೊಂಡ್ ಬಿಟ್ರೆ ಸಾಕು, ತಮ್ಮ ಭಾಷೆಯನ್ನು, ತಮ್ಮತನವನ್ನೇ ಮರೆತುಬಿಡ್ತಾರೆ. ಇದು ಅತೀ ಎನಿಸಿದರೂ, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೆ ವರ್ತಿಸುವ ಹಾಗೆ ಮಾಡಿಬಿಡುತ್ತದೆ ಎನ್ನೋದು ನನ್ನ ಅಭಿಮತ.

ನಮ್ಮ ಇಂದಿನ ಆಂಗ್ಲ ಭಾಷೆಯ ಅವಲಂಬನೆಯನ್ನು ತಡೆಯುವುದಕ್ಕೆ ಆಗ್ತಾ ಇರಲೇ ಇಲ್ವಾ? ಈ ಪ್ರಶ್ನೆಗೆ ನನ್ನಲ್ಲಿ ಸ್ಪಷ್ಟವಾದ ಉತ್ತರ ಇಲ್ಲ.

ಕೊನೇ ಮಾತು: ಕನ್ನಡವನ್ನು ಉಳಿಸೋದು ಅಂದ್ರೆ ಒಂದಿಷ್ಟು ಕತೆಗಳು, ಕವನಗಳು ಬರೆಯೋದಲ್ಲ. ಪ್ರತಿಯೊಂದರಲ್ಲೂ ಕನ್ನಡವನ್ನು ಬಳಸೋದು. ಕನ್ನಡ ಅಂದ್ರೆ ಬರೀ ಸಾಹಿತ್ಯ ಅಲ್ಲಾ ಅಲ್ವ? ಮತ್ತೇಕೆ ಬರೀ ಸಾಹಿತಿಗಳು ಹೋರಾಡಬೇಕು ಕನ್ನಡ ಮಾಧ್ಯಮಕ್ಕಾಗಿ!!!?? ಪಾಪ ಅನಿಸ್ತಿದೆ!!!

Friday, December 19, 2014

ಪೆಟ್ರೋಲ್ ಪುರಾಣ!!

ನಮ್ ದೇಶದಲ್ಲಿ ಈಗ ಪೆಟ್ರೋಲ್ ಬೆಲೆ ಇಳಿಕೆಯ ಸದ್ದು ಜೋರಾಗೇ ಕೇಳಿಸ್ತಾ ಇದೆ. ಆದರೆ ಇದೇ ವಿಚಾರವಾಗಿ ಪ್ರಪಂಚದ ಇನ್ನಿತರೇ ದೇಶಗಳಲ್ಲಿ ಯಾವ ರೀತಿಯ ಕೋಲಾಹಲ ಉಂಟು ಮಾಡ್ತಾ ಇದೆ ಇದೆ ಅಂತ ತಿಳಿಸೋ ಒಂದು ಒಂದು ಸಣ್ಣ ಪ್ರಯತ್ನ ಮಾಡಿದಿನಿ ಇವತ್ತು.

ಕಳೆದ ಬೇಸಿಗೆಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಇಳಿಕೆಯಾಗಿದೆ. ಯಾಕೆ ಇಳಿಕೆಯಾಗ್ತಿದೆ ಅಂತ ಖಂಡಿತವಾಗಿಯೂ ನನಗೆ ತಿಳಿದಿಲ್ಲ. ಬಲ್ಲ ಮೂಲಗಳ ಪ್ರಕಾರ, ಇತ್ತೀಚಿಗೆ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೊಸ ಪೂರೈಕೆದಾರರ ಉಗಮ ಆಗಿದೆ. ಲಿಬಿಯ ಹಾಗೂ ಇನ್ನೀತರೆ ದೇಶಗಳು ಬದಲಾದ ರಾಜಕೀಯ ಪರಿಸ್ಥಿತಿಗಳಿಂದ ಹೆಚ್ಚು ಹೆಚ್ಚು ಪಾಲನ್ನು ಮಾರುಕಟ್ಟೆಗೆ ಪೂರೈಸಲು ಸಾದ್ಯವಾಗ್ತಾ ಇದೆ. ಇನ್ನೊಂದೆಡೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಾಂಪ್ರದಾಯಿಕವಲ್ಲದ ಉತ್ಪನ್ನ ಗಣನೀಯವಾಗಿ ಹೆಚ್ಚುತ್ತಾ ಇದೆ (ಶೆಲ್ (shale)- ತೈಲ). ಸಾಂಪ್ರದಾಯಿಕ ಕಚ್ಚಾ ತೈಲ ಪೂರೈಕೆದಾರರಾದ ಹಾಗೂ opec ಸಮೂಹಕ್ಕೆ ಒಳಪಟ್ಟ ರಾಷ್ಟ್ರಗಳು ತಮ್ಮ ಉತ್ಪನ್ನ ಸಾಮರ್ಥ್ಯವನ್ನು ಇಳಿಸುತ್ತಿಲ್ಲ. ಆದ ಕಾರಣ ಪೂರೈಕೆ ಹಾಗೂ ಬೇಡಿಕೆಯ ನಡುವಿನ ಅಂತರ ಹೆಚ್ಚಾಗಿ ಕಚ್ಚಾ ತೈಲದ ಬೆಲೆ ಕಮ್ಮಿ ಆಗಿದೆ. ಇದರ ನೇರ ಪರಿಣಾಮ ಬೆಲೆ ಉತ್ಪಾದಕ ರಾಷ್ಟಗಳ ಮೇಲೆ ಹೇಗಾಗಿದೆ ಎಂದು ವಿಶ್ಲೇಷಣೆ ನಡೆಸಿದಾಗ ತಿಳಿದು ಬಂದ ವಿಷಯಗಳು ಇವು.

ಅತಿಯಾದ ಬೆಲೆ ಕುಸಿತದಿಂದ, ಕೆನಡ ಹಾಗೂ ರಷಿಯದ ಆರ್ಥಿಕ ಬೆಳವಣಿಗೆ ತುಂಬಾ ಹದಗೆಟ್ಟು ಹೋಗಿದೆ. ಸಣ್ಣ ಸಣ್ಣ ಪೂರೈಕೆದಾರ ರಾಷ್ಟ್ರಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. opec ಕೂಟಗಳಿಗೆ ತಮ್ಮ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂಬ ರಷಿಯ ಹಾಗೂ ಇನ್ನಿತರೇ ರಾಷ್ಟ್ರಗಳ ಸಲಹೆಯನ್ನು ಮುಖ್ಯ ಸಾಂಪ್ರದಾಯಿಕ ಉತ್ಪಾದಕ ರಾಷ್ಟ್ರ ಹಾಗೂ opec ಸಮೂಹಕ್ಕ್ಕೆ ಸೇರಿದ ಸೌದಿ ಅರೇಬಿಯಾ ಸೊಪ್ಪು ಹಾಕುತ್ತಿಲ್ಲ. ಇದರ ಅರ್ಥ ತನಗೆ ನಷ್ಟವಾದರೂ ಪರವಾಗಿಲ್ಲ ನನ್ನ ಉತ್ಪಾದನೆಯನ್ನು ಇಳಿಸುವುದಿಲ್ಲ ಎಂದಲ್ಲ.

ಸ್ವಲ್ಪ ಆಳಕ್ಕೆ ಹೋಗುವೆ, ಇಂದಿನ ಕಚ್ಚಾತೈಲದ ಬೆಲೆ ೬೦ ಡಾಲರು ಪ್ರತೀ ಬ್ಯಾರೆಲ್ಲಿಗೆ. ಸಾಂಪ್ರದಾಯಿಕ ಹಾಗೂ ಹೆಚ್ಚಿನ ಮಾರುಕಟ್ಟೆ ಪಾಲು ಇರುವ ಸೌದಿಯಂತಹ ರಾಷ್ಟ್ರಗಳಿಗೆ ಇದರಿಂದ ಅಷ್ಟೇನೂ ತೊಂದರೆಯಾಗದು. ಅದು ೪೦ ಡಾಲರು ಪ್ರತೀ ಬ್ಯಾರೆಲ್ಲಿಗೆ ಹೋಗುವ ತನಕ ತೆಲೆಬಿಸಿ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಸೌದಿಯ ಇಂದನ ಸಚಿವರ ಇತ್ತೀಚಿನ ಹೇಳಿಕೆ ಸ್ಪಷ್ಟಪಡಿಸುತ್ತದೆ . ಕೆನಡವೂ ಸಾಂಪ್ರದಾಯಿಕ ರೀತಿಯಲ್ಲಿ ತೈಲೋತ್ಪಾದನೆ ಮಾಡುತ್ತಿದ್ದರೂ ಅದರ ಪಾಲು ಕಡಿಮೆಯಗಿರುವುದರಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಕೆನಡದ ರೂಪಾಯಿ ಮೌಲ್ಯ ದಿನೇದಿನೇ ಕುಸಿಯುತ್ತಿದೆ. ಇನ್ನು ವೆನೆಜುಯಲ ದಂತಹ ಸಣ್ಣ ರಾಷ್ಟ್ರಗಳಿಗೆ ತುಂಬಾ ತೂಂದರೆ ಉಂಟಾಗಲಿದೆ.

ರಷಿಯದ ಪರಿಸ್ಥಿತಿ ಸಿಕ್ಕಾಪಟ್ಟೆ ಗಂಭೀರವಾಗಿದೆ. ತನ್ನ ಆದಾಯದ ಸಿಂಹಪಾಲು ಹೊಂದಿರೋ ತೈಲ ಬೆಲೆಯ ಕುಸಿತದಿಂದ ಹಾಗೂ ಉಕ್ರೇನ್ ವಿಷಯದಲ್ಲಿ ವಿಶ್ವ ಸಮುದಾಯದ (ಅಮೇರಿಕಾ ಹಾಗೂ ಯುರೋಪ್ ಸಂಘಟನೆ) ಎದುರು ಹಾಕಿಕೊಂಡಿರುವುದರಿಂದ ಅದರ ಕರೆನ್ಸಿಯಾದ ರೂಬೆಲ್ ಡಾಲರಿನ ಎದುರು ಹತ್ತಿರತ್ತಿರ ೬೦ ಪ್ರತಿಶತ ಕುಸಿದಿದೆ. (ಜೂನ್ ತಿಂಗಳಿನಲ್ಲಿ ಒಂದು ಡಾಲರಿಗೆ ೩೫ ರೂಬೆಲ್ ಇತ್ತು, ಇಂದಿಗೆ ಅದು ೬೨ ರೂಬೆಲ್ ಆಗಿದೆ, (ಇದು ದಿನವೂ ಬದಲಾಗುತ್ತಿದೆ, ಮೊನ್ನೆ ಒಂದು ಡಾಲರ್ ಬೆಲೆ ೮೦ ರೂಬೆಲ್ ವರೆಗೂ ಕುಸಿದಿತ್ತು ಹಾಗಾಗಿ ನಾನು ಕೊಟ್ಟಿರುವ ಅಂಕಿ ಅಂಶಗಳು ಒಂದು ಅಂದಾಜಷ್ಟೇ!)) ಇದೀಗ ರಶಿಯಾದ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಶಿಯಾದ ಅಧ್ಯಕ್ಷ ತೈಲ ಬೆಲೆ ಕಡಿಮೆಯಾಗುವುದರಲ್ಲಿ ಸೌದಿ ಹಾಗೂ ಅಮೇರಿಕಾಗಳು ಮಸಲತ್ತು ನಡೆಸಿರಬಹುದು ಎಂದು ಅಭಿಪ್ರಾಯ ಪಟ್ಟರು. ರೂಬೆಲ್ ಅನ್ನು ಉಳಿಕೊಳ್ಳಲು ಇತ್ತೆಚಿಗಷ್ಟೇ ರಶಿಯಾದ ಕೇಂದ್ರೀಯ ಬ್ಯಾಂಕು ಬಡ್ಡಿದರ ವನ್ನು ೧೭% ಗೆ ಏರಿಕೆ ಮಾಡಿದೆ. ಇದರ ಪರಿಣಾಮ ಖಂಡಿತವಾಗಿ ದೇಶಿಯ ಮಾರುಕಟ್ಟೆಯ ಮೇಲೆ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನು ಅಮೇರಿಕಾ ದ ವಿಚಾರಕ್ಕೆ ಬರೋಣ, ಅಮೇರಿಕಾದ ಸಾಕಷ್ಟು ಕಂಪನಿಗಳು ಇತ್ತೆಚಿಗಷ್ಟೇ ಸಾಂಪ್ರದಾಯಕವಲ್ಲದ ತೈಲವಾದ shale-ಉತ್ಪಾದನೆಯಲ್ಲಿ ತೊಡಗಿವೆ. ಇದು ಉತ್ಪಾದನೆ ಲಾಭದಾಯಕವಾಗಬೇಕೆಂದರೆ ಕನಿಷ್ಠ ೬೦-೭೦ ಡಾಲರು ಪ್ರತೀ ಬ್ಯಾರೆಲ್ಗೆ ಸಿಗಬೇಕು ಎಂದು ಕೈಗಾರಿಕೊಧ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ. ಆದಕಾರಣ ಕಂಪನಿಗಳು ಹೊಸ ಹೂಡಿಕೆಯಿಂದ ಹಿಂದೆ ಸರಿಯುತ್ತಿವೆ. ಇಂತಹದ್ದೇ ಒಂದು ಕಂಪನಿಯಾದ vargin ಸಮುದಾಯದ ಅಧ್ಯಕ್ಷ ರಿಚರ್ಡ್ ಬ್ರಾಸ್ನನ್ ಇಂದು, "ಸೌದಿ ಯು ಬೇಕಂತಲೇ ತೈಲ ಬೆಲೆಯ ಇಳಿಕೆಗೆ ಕಾರಣವಾಗಿದೆ ಹಾಗೂ ಇದರಿಂದ ಪರಿಸರ ಸ್ನೇಹಿ ಉತ್ಪಾದನೆಯಾದ shale ತೈಲಕ್ಕೆ ದೊಡ್ಡ ಗಂಡಾಂತರ ಉಂಟು ಮಾಡುತ್ತಿದೆ" ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾನೆ. ಈ ವಿದ್ಯಮಾನಗಳಿಂದ ಅಮೇರಿಕಾ ದ ಆರ್ಥಿಕ ಪಂಡಿತರು ಕಳವಳವನ್ನು ವ್ಯಕ್ತಪಡಿಸಿಯಾಗಿದೆ.

ಒಟ್ಟಿನಲ್ಲಿ, ಕಚ್ಚಾ ತೈಲದ ಬೆಲೆ ನಿಜವಾಗ್ಯೂ ಕಡಿಮೆ ಆಗಿದೆಯಾ? ಹಾಗಿದ್ರೆ ಕಾರಣ ಏನುಕೃತಕ ಸೃಷ್ಟಿಯಾಗಿದ್ರೆ, ಯಾಕಾಗಿ ಎನ್ನುವ ಪ್ರಶ್ನೆ ಇದೆ.

ನಿಜವಾದ ವಿಚಾರ ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಒಬ್ಬರ ಮೆಲೋಬ್ಬರು ಗೂಬೆ ಕೂರಿಸುತ್ತಿದಾರೆ!

Saturday, December 6, 2014

ಪರದೇಶದಲ್ಲಿ ಪರದಾಟ-೧

ಕೆಲವೊಂದು ಸಲ ಭಾಷೆ ಅನ್ನೋದು ಎಷ್ಟು ಮುಖ್ಯ ಅಂತ ಗೊತ್ತಾಗಬೇಕಾದರೆ, ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಹೋಗಬೇಕು. ನಮ್ಮ ದೇಶದಲ್ಲಿ ಹೆಂಗೆಂಗೋ ಮಾಡಿ ಸಂವಹನ ಮಾಡಿಬಿಡ್ತಿವಿ (ತಮಿಳುನಾಡು ಬಿಟ್ಟು). ಆದರೆ ಒಂದು ಸಲ ದೇಶ ಬಿಟ್ಟ್ವಿ ಅಂದ್ರೆ ಮುಗಿದು ಹೋಯ್ತು. ಅದರಲ್ಲೂ, ನೀವು ಯುರೋಪಿಯನ್ ದೇಶಗಳಿಗೋ (UK ಬಿಟ್ಟು), ಆಫ್ರಿಕಾ ಕ್ಕೊ, ಜಪಾನ್ ಗೋ ಹೋದ್ರಿ ಅಂದ್ರೆ ಮುಗಿದೇ ಹೋಯ್ತು ನಿಮ್ಮ ಕಥೆ. ಈಗ ನಾ ಹೇಳೋಕೆ ಹೊರಟಿರೋದು ಅಂತದೇ ಒಂದು ಕಥೆ (ಸುಮಾರು ಇವೆ, ಆದ್ರೆ ಸದ್ಯಕ್ಕೆ ಒಂದು ಸಾಕು).

ರಷಿಯದಲ್ಲಿ ಜನ ಜಪ್ಪಯ್ಯ ಅಂದ್ರೂ ಒಂದೇ ಒಂದು ಪದ ಆಂಗ್ಲ ಭಾಷೆ ಮಾತಾಡೋಲ್ಲ ಅಂತಾರೆ. ಪಾಪ ಬಂದರೆ ತಾನೇ ಮಾತಾಡೋಕೆ. ನಾವು ಏನೇ ಆಂಗ್ಲ ಭಾಷೆನಲ್ಲಿ ಮಾತಾಡಿದ್ರೂ ಅದು ಅರಣ್ಯರೋಧನ ಅಷ್ಟೇ!! ಮಾಸ್ಕೋ ಗೆ ಬಂದ ಹೊಸದರಲ್ಲಿ ನನಗಂತೂ ತೆಲೆ ಕೆಟ್ ಹೋಗಿತ್ತು. ಎಲ್ಲಾ ಮಾಹಿತಿ ರಷ್ಯನ್ ನಲ್ಲೆ ಇರುತ್ತೆ. ಸಧ್ಯ ಸಂಖ್ಯೆಗಳು ಮಾತ್ರ ಹಿಂದೂ-ಅರೇಬಿಕ್ (ನಿಜವಾಗಿಯೂ ಅವು ನಮ್ಮ ಹೀರೀಕರು ಕಂಡುಹಿಡಿದ ಸಂಖ್ಯೆಗಳೇ, ಅರೇಬಿಯನ್ಗಳು ಕದ್ದು ಅದನ್ನೇ ಹಿಂದೂ-ಅರೇಬಿಕ್ ಅಂತ ಮಾಡಿದ್ದು ಬೇರೆ ವಿಷಯ). ಏನೋ ಅದೊಂದು ಕಾರಣದಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆ, ಸೂಪರ್ ಮಾರ್ಕೆಟ್ ನಲ್ಲಿ ಹಣ ಕೊಡುವಾಗ ತೊಂದರೆ ಆಗೋಲ್ಲ. ಆದರೆ ನಿಮಗೆ ಮೊದಲೇ ನೀವು ಇಳಿಯುವ ಸ್ಥಳ ಚೆನ್ನಾಗಿ ಗೊತ್ತಿರಬೇಕು ಇಲ್ಲ ಅಂದ್ರೆ ಕಥೆ ಮುಗಿದಂತೆಯೇ. ನಾನು ಏನೋ ಹೇಳೋಕೆ ಹೋಗಿ ಮತ್ತಿನ್ನನೀನೋ ಶುರು ಮಾಡಿಬಿಟ್ಟೆ. ಈಗ ವಿಷಯಕ್ಕೆ ಬರೋಣ. ಇಲ್ಲಿ ಸಿಕ್ಕಾಪಟ್ಟೆ ಚಳಿ ಹವೆ ಇರ್ರೋದ್ರಿಂದ ಚರ್ಮ ಒಡೆದು ಕಡಿಯೋಕೆ ಶುರು ಆಗುತ್ತೆ. ನಾನೂ ಬೆಂಗಳೂರಿಂದ ಬರುವಾಗ vaselline ಅಥವಾ moisturizer ತರಲಿಲ್ಲ. ನನ್ನ ಚರ್ಮ ಒಡೆದು ಕಡಿಯೋಕೆ ಶುರು ಆಯಿತು. ಏನ್ ಮಾಡಲಿ, ಅಂಗಡಿಗೆ ಹೋಗಿ ಏನ್ ಅಂತ ಕೇಳೋದು? ಭಾಷೆ ಬರೋಲ್ಲವೇ. ನನ್ನ ಕೆಲವು ರಷ್ಯನ್ ಸಹೋದ್ಯೋಗಿಗಳಿಗೆ ಆಂಗ್ಲ ಭಾಷೆ ಬರುತ್ತಿತ್ತದರೂ ಅವರಿಗೇಕೆ ಸುಮ್ಮನೆ ತಾಪತ್ರಯ ಅಂದು ಕೇಳುವ ಮನಸಾಗಲಿಲ್ಲ. ನನ್ನ ವಸತಿ ಸಮುಚ್ಚಯದ ಹತ್ತಿರವೇ ಒಂದು ಬಹುದೊಡ್ಡ supermarket ಇದೆಯಾದರೂ ಅಲ್ಲಿ ಎಲ್ಲವೂ ರಷ್ಯನ್ ಮಯ. ಅಲ್ಲಿ ನನ್ನ ಗೂಗಲ್ translator ಬೇರೆ ಕೆಲಸ ಮಾಡೋಲ್ಲ (ಸಿಕ್ಕಾಪಟ್ಟೆ ಜನಜಂಗುಳಿ ಇಂದ ನೆಟ್ವರ್ಕ್ ಸಮಸ್ಯೆ). ಕೊನೆಗೆ ನಾನೇ ಹುಡುಕಿ ಬಿಡುವ ಅಂತ ಹೊರಟೆ. ಅಲ್ಲಿಗೆ ನಾನು ಅವಾಗವಾಗ ಹೋಗ್ತಾ ಇರ್ತೇನೆ. ಹೋಗಿ ಹುಡುಕಲು ಶುರು ಮಾಡಿದೆ, ನೂರೆಂಟು ಕ್ರೀಂ ಗಳು ಇವೆ ಆದರೆ ಅದರಲ್ಲಿ ನನಗೆ ಬೇಕಾದದ್ದು ಯಾವುದು ಅಂತ ಹೆಂಗೆ ಗೊತ್ತಾಗುತ್ತೆ. ಪೊಟ್ಟಣದ ಮೇಲಿನ ಮಾಹಿತಿ ಎಲ್ಲ ರಷ್ಯನ್ ನಲ್ಲೆ ಇರುತ್ತೆ. ಹುಡುಕಿ ಹುಡುಕಿ ಸೋತೆ, ಸಮಯವಾಯಿತೆಂದು ವಾಪಾಸ್ ಬಂದೆ. ಅದರ ಮಾರನೆ ದಿನ, ಇವತ್ತು ತೆಗೆದುಕೊಳ್ಳಲೇ ಬೇಕು ಅಂತ, ಕೋಣೆಯಲ್ಲಿಯೇ ಕುಳಿತು ಸ್ವಲ್ಪ ಸಂಶೋಧನೆ ಮಾಡಿ ಹೊರಟೆ. ಇಲ್ಲಿ ಸಿಗಬಹುದಾದ ಕೆಲವೊಂದು ಕ್ರಿ೦ ಗಳ ಪೊಟ್ಟಣ ದ ಫೋಟೋ ಜಾಲತಾಣಗಳಿಂದ ನನ್ನ ಪುಟ್ಟ ಮೊಬೈಲ್ ಫೋನ್ ನಲ್ಲಿ ಇಳಿಸಿಕೊ೦ಡು ಹೋದೆ. ಆದರೆ ಅಲ್ಲಿ ಮತ್ತದೇ ಹಣೆಬರಹ. ನಾನು ತೆಗೆದು ಕೊಂಡ ಹೋದ ಫೋಟೋ ದಲ್ಲಿ ಇರುವ ಯಾವ ಕ್ರಿ೦ ಕೂಡ ಅಲ್ಲಿರಲಿಲ್ಲ. ಅಲ್ಲಿರೋರನ್ನ ಕೇಳಿದರೆ, ಪಾಪ ಅವಕ್ಕೆ ನಾನು ಏನನ್ನ ಕೇಳ್ತಾ ಇದೀನಿ ಅಂತಾನೆ ಗೊತ್ತಾಗ್ತಾ ಇಲ್ಲ. ಏನ್ ಮಾಡೋದು ಅಂತ ಅತ್ಲಿಂದ ಇತ್ಲಾಗೆ, ಇತ್ಲಿಂದ ಅತ್ಲಾಗೆ ಅಲೀತ ಇದ್ದೆ. ಆಗ ಕಾಣಿಸ್ತು ನೋಡಿ ಒಂದು ಪೊಟ್ಟಣ ಮೂಲೆಯಲ್ಲಿ, ನಮ್ಮ ದೇಶದ್ದು, ಆದರ ಬಣ್ಣ, ಡಿಸೈನ್ ನೋಡೇ ಗುರುತು ಹಿಡಿದು ಬಿಟ್ಟೆ, ನಮ್ BORO PLUS. ಒಂತರ ಸ್ವರ್ಗನೇ ಧರೆಗೆ ಇಳಿದಂತೆ ಆಯ್ತು ಆ ಕ್ಷಣ. ನಂಗೆ ಬೇಕಾಗಿದ್ದು ಸಿಗದೇ ಹೋದರೂ. ಅದರಿಂದ ತಕ್ಕಮಟ್ಟಿಗೆ ಕೆಲಸ ಆಗ್ತಾ ಇದ್ದಿದ್ದರಿಂದ ತೆಗೊಂಡು ಬಂದೆ. ಅದರ ಮುಂದಿನ ವಾರ ನನ್ನ ಭಾರತೀಯ ಸಹೋದ್ಯೋಗಿಯ ಮನೆಗೆ ಹೋದಾಗ (ಅವನದ್ದು ನನ್ನ ವಸತಿ ಸಮುಚ್ಚಯದಿಂದ ತುಂಬಾ ದೂರ). ಅವನಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. ಅವನು ಮಾಸ್ಕೋ ದಲ್ಲೇ ಎರಡು ವರ್ಷದಿಂದ ಇದಾನೆ, ಅವನು ಬಂದ ಹೊಸದರಲ್ಲಿ ನನ್ನ ತರಾನೆ ಪರದಾಡಿದ ಕಥೆ ಹೇಳಿಕೊಂಡ. ಇಬ್ಬರೂ ಸಿಕ್ಕಾಪಟ್ಟೆ ನಕ್ವಿ ನಮ್ ಸ್ಥಿತಿ ನೆನೆಸಿಕೊಂಡು. ಆಮೇಲೆ ಒಂದು ಬಾಟಲಿ ತೋರಿಸಿದ, ಅದರ ಚಿತ್ರವನ್ನು ಅಲ್ಲೇ ಕ್ಲಿಕ್ಕಿಸಿ save ಮಾಡಿಕೊಂಡೆ. ನನ್ನ ಕೋಣೆ ಬರೋ ದಾರೀಲಿ ಅದೇ supermarket ಗೆ ಹೋಗಿ ಅಲ್ಲಿರೋ salesman ಗೆ ತೋರಿಸಿದಾಗ ಅವ್ನು ಅದು ಇರೋ ಸ್ಥಳ ತೋರಿಸಿದ.. ಹೀಗೆ ಮುಗೀತು ನನ್ನ ಒಂದು moisturizer ಪುರಾಣ.

ಇಂತಹ ಅದೆಷ್ಟೋ ವಿಚಾರ ದಿನವೂ ನಡಿತ ಇರುತ್ತೆ. ಇವರ ಭಾಷಾಭಿಮಾನವನ್ನು ನಾವು ನೋಡಿ ಕಲಿಯೋದು ಸಾಕಷ್ಟಿದೆ!!