Monday, July 4, 2016

ಆಹಾ ಕೆಂಪು ಬಸ್ಸೇ!

ಬಸ್ಸು ಅಂದಾಕ್ಷಣ ನನ್ನ ವಯಸ್ಸಿನ ಹಲವರಿಗೆ ಮೊದಲು ನೆನಪಾಗೋದು ಕೆಂಪು ಬಣ್ಣದ, ವಿಕಾರವಾದ ಕರ್ನಾಟಕ ಸಾರಿಗೆಯ ಟಾಟಾ ಬಸ್ಸುಗಳು. ನಂಗೆ ನೆನಪಿರೋ ಹಾಗೆ ನಂಗೆ ಈ ಕೆಂಪು ಬಸ್ಸುಗಳನ್ನು ಪರಿಚಯಿಸಿದ್ದು ನಮ್ಮ ಚಿಕ್ಕಪ್ಪಂದಿರೇ ಇರಬೇಕು. ಆಗ ನಮ್ಮೂರಿಗೆ ಬರುತ್ತಿದ್ದುದು ಒಂದೋ ಎರಡೋ ಬಸ್ಸುಗಳು ಅಷ್ಟೇ, ನಾನು ಹುಟ್ಟಿದ, ಬೆಳೆದ ಆ ಊರನ್ನು ಊರು ಅನ್ನುವುದಕ್ಕಿಂತ ಹಳ್ಳಿ ಅನ್ನೋದು ಸೂಕ್ತ. ಕುಗ್ರಾಮವೇನೂ ಅಲ್ಲದಿದ್ದರೂ ಸಿಕ್ಕಾಪಟ್ಟೆ ದೊಡ್ಡ ಹಳ್ಳಿಯೇನೂ ಆಗಿರಲಿಲ್ಲ. ಇಂತದೊಂದು ಹಳ್ಳಿಯಲ್ಲಿ ನನ್ನ ಬಾಲ್ಯ ಯಾವುದೇ ತಂಟೆ-ತಕರಾರುಗಳಿಲ್ಲದೇ ಸಾಗುತ್ತಿತ್ತು. ಅಚ್ಚಳಿಯದೆ ಬಾಲ್ಯದ ನೆನಪುಗಳಲ್ಲಿ ಈ ಬಸ್ಸುಗಳ ಪುರಾಣವೂ ಒಂದು. ರಜಕ್ಕೋ, ಅಥವಾ ಯಾವುದೊ ಕೆಲಸಕ್ಕೂ ಊರಿಗೆ ಬಂದ ನಮ್ಮ ಚಿಕ್ಕಪ್ಪಂದಿರು ವಾಪಾಸ್ ಹೊರಟಾಗ ನಮ್ಮ ಕೆಲಸ ಊರ ಮುಂದೆ ಹೋಗಿ ಕೆಂಪು ಬಸ್ಸು ದೂಳೆಬ್ಬಿಸುತ್ತಾ ಹೊಂಡದ ಏರಿಯ ಮೇಲೋ, ಬ್ಯಾಡರ ಹಟ್ಟಿಯ ಕಡೆಯಿಂದಲೋ ಊರಿಗೆ ಪ್ರವೇಶಿಸುತ್ತಾ ಇದ್ದಂತೆಯೇ ಮನೆಗೆ ಓಡಿ ಸುದ್ದಿ ಮುಟ್ಟಿಸುವುದು.. ತಮ್ಮ ಕಡೆಯ ಕ್ಷಣದ ಚರ್ಚೆಯಲ್ಲಿ ತೊಡಗಿಕೊಂಡಿರುತ್ತಿದ್ದ ಅವರುಗಳು ಊರ ಮುಂದಕ್ಕೆ ಓಡುತ್ತಿದ್ದುದು ನೆನಪಿದೆ. ಆಗ ಹಳ್ಳಿಗೆ ಇದ್ದದ್ದು ಒಂದೇ ರಸ್ತೆ (ಈಗಲೂ ಒಂದೇ ಇರಬಹುದು) ಒಂದು ಕಡೆ ಹೋದರೆ ದಾವಣಗೆರೆಗೊ, ಹರಪನಹಳ್ಳಿಗೊ ಹೋಗಬಹುದಿದ್ದರೆ, ಮತ್ತೊಂದು ದಿಕ್ಕಿಗೆ ಹೋದಲ್ಲಿ ಕೊಟ್ಟೂರು, ಕೂಡ್ಲಿಗಿ ಸೇರಿಕೊಳ್ಳಬಹುದಿತ್ತು. ಬೆಳಿಗ್ಗೆ ಬಳ್ಳಾರಿ ಬಸ್ಸಿನಿಂದ ಶುರುವಾಗುತ್ತಿದ್ದ ದಿನ ಕೊನೆಯ ದಾವಣಗೆರೆ ಬಸ್ಸಿನೊಂದಿಗೆ ಅಂತ್ಯವಾಗುತ್ತಿತ್ತು. ನಡುವೆ ಒಂದು ಎಪೆಮ್ಸಿ (APMC) ಅವಾಗವಾಗ ಬರುತ್ತಿದ್ದ ಇನ್ನೊಂದು ಬಸ್ ಬಿಟ್ರೆ ಬೇರೆ ಬಸ್ ಇಲ್ಲ.

ಹೀಗಿರುವಾಗ ಬಸ್ಸು ಎಂದರೆ ನಮಗೆ ಅದೆಂತದೋ ಉತ್ಸಾಹ. ಸ್ಟೇರಿಂಗ್ ಹಿಡಿದು ಬಸ್ಸು ಚಲಾಯಿಸುವ ಚಾಲಕ ಮಹಾಶಯ ನಮಗೆ ಅತಿಮಾನುಷ ವ್ಯಕ್ತಿ! ನಮ್ಮನೆಗೆ ಯಾರೇ ಬಂದರೂ ಇವುಗಳಲ್ಲೇ ಬರಬೇಕು, ಕೆಲವೊಮ್ಮೆ ನಾವುಗಳು ಬಸ್ಸು ಬಂದಾಕ್ಷಣ ಊರ ಮುಂದಕ್ಕೆ ಓಡಿ, ನಮ್ಮವರು ಯಾರದ್ರೂ ಇದ್ದಾರೆಯೇ ಎಂದು ಪರೀಕ್ಷಿಸಿ, ಇದ್ದಲ್ಲಿ ಅವರ ಕೈಚೀಲಗಳನ್ನು ಕಸಿದು, ಮನೆಯ ಕಡೆಗೆ ಓಡಿ, ಬಂದವರಿಗಿಂತಾ ನಾವೇ ಮುಂಚಿತವಾಗಿ ಸುದ್ದಿ ಮುಟ್ಟಿಸುತ್ತಿದ್ದುದು ಇದೆ.

ಬರುತ್ತಿದ್ದ ಬಸ್ಸುಗಳೆಲ್ಲ ಸರ್ಕಾರಿ ಬಸ್ಸುಗಳೇ ಆದುದರಿಂದ ಎಲ್ಲ ಕೆಂಪೇ!! ಹಳ್ಳಿಗಳ ಕಡೆ ಬರುತ್ತಿದ್ದ ಬಸ್ಸುಗಳೆಲ್ಲ ಉದ್ದದಲ್ಲಿ ಸಣ್ಣದಾದ ಟಾಟಾ ಬಸ್ಸುಗಳೇ. ಉದ್ದನೆಯ ಬಸ್ಸು ನೋಡದಿದ್ದ ನಮಗೆ ಒಮ್ಮೆ ನಮ್ಮೂರಿನ ರಸ್ತೆಯಲಿ ಉದ್ದನೆಯ ಹಾಗೂ ಸುಂದರವಾಗಿದ್ದ ಅಶೋಕ್ ಲೇಲ್ಯಾಂಡ್ ಬಸ್ಸು ನೋಡಿದಾಗ ಉಂಟಾದ ಆನಂದ ಮೊನ್ನೆ ಯಾವಾಗಲೋ Boeingನ Dreamliner ವಿಮಾನ ನೋಡಿದಾಗಲೂ ಆಗಿಲ್ಲ ಅನಿಸುತ್ತೆ. ಅವತ್ತು ಆಗಿದ್ದೇನಂದ್ರೆ ಇನ್ಯಾವುದೋ ಮುಖ್ಯರಸ್ತೆಯಲ್ಲಿ ಅಡಚಣೆಯಾದ್ದರಿಂದ ವೇಗದೂತ ಬಸ್ಸುಗಳೆಲ್ಲವೂ ನಮ್ಮೂರಿನ ರಸ್ತೆಯನ್ನು ಬಳಸಿ ಹೋಗುತ್ತಿದ್ದ ಕಾರಣದಿಂದ ನಮಗೆ ಒಂದೆರಡು ಬಸ್ಸುಗಳನ್ನು ನೋಡುವ ಸೌಭಾಗ್ಯ ದೊರೆತಿತ್ತು. ನಮ್ಮ ನಮ್ಮಲ್ಲೇ ಸಭೆ ನಡೆಸಿ, ಈ ಬಸ್ಸುಗಳು ಇಲ್ಯಾಕೆ ಬಂದಿವೆ, ಇನ್ನು ಮುಂದೆ ದಿನಾ ಬರ್ತಾವ ಎಂದು ಚರ್ಚಿಸಿ ನಮ್ಮ ಅಣ್ಣನೋ ಚಿಕ್ಕಪ್ಪನೋ ಮೇಲಿನಂತೆ ಹೇಳಿದಾಗ ನಮ್ಮ ಅತ್ಯುತ್ಸಾಹಕ್ಕೆ ಬ್ರೇಕ್ ಬಿದ್ದಂತೆ ಆಗಿದ್ದು ನಿಜ.

ನಮಗೆ ಬಸ್ಸು ನೋಡಿದರೇನೇ ಅಷ್ಟು ಖುಷಿಯಿದ್ದಾಗ ಇನ್ನು ಬಸ್ಸು ಹತ್ತಿದರೆ ಕೇಳುವುದೇ ಬೇಡ! ಟಿವಿಯನ್ನು ನೋಡದಿದ್ದ ನಮಗೆ ಆಗ ಈ ಸೂಪರ್ ಮ್ಯಾನ್, ಹೀಮ್ಯಾನ್ ಗಳ ಪರಿಚಯವೂ ಇರಲಿಲ್ಲ. ಈ ಬಸ್ಸು ಡ್ರೈವರ್ ಗಳೇ ನಮ್ಮ ಹೀರೋಗಳು. ಬಹುಪಾಲು ಹಳೆಯ ಬಸ್ಸುಗಳಲ್ಲಿ ಡ್ರೈವರ್ ಕ್ಯಾಬಿನ್ ಗೂ ಪ್ರಯಾಣಿಕರ ಸೀಟುಗಳಿಗೂ ನಡುವೆಯೊಂದು ಜಾಲರಿಯೋ, ಮುಂದಿಂದೇನೂ ಕಾಣದ ದಪ್ಪ ತಗಡೋ ಇರುತ್ತಿತ್ತು. ತಗಡಿದ್ದರೆ ನಮ್ಮ ಹೀರೋನನ್ನು ನೋಡುವ ಭಾಗ್ಯ ಇರುತ್ತಿರಲಿಲ್ಲ.. ಆದರೆ ಜಾಲರಿಯಿದ್ದಲ್ಲಿ ಮುಗಿಯಿತು, ನಮ್ಮ ಆನಂದಕ್ಕೆ ಪಾರವೇ ಇಲ್ಲ! ದೊಡ್ಡ ಗಾಜಿನ ಹಿಂದೆ ಕಾಣುತ್ತಿದ್ದ ರಸ್ತೆಯ ನೋಟ, ಡ್ರೈವರ್ ಸಾಹೇಬರು ಒಮ್ಮೊಮ್ಮೆ ಒಂದೇ ಕೈಯಿಂದ ಸ್ಟೇರಿಂಗ್ ಅನ್ನು ತಿರುಗಿಸುವ ಶೈಲಿ. ಕಡಿದಾದ ತಿರುವು ಬಂದಾಗ, ಸ್ಟೇರಿಂಗ್ ನ್ಯೂಟನ್'ನ ಮೊದಲೇನೆ ನಿಯಮದಂತೆ ತನ್ನಷ್ಟಕ್ಕೆ ತಾನೇ ಗರಗರನೆ ತಿರುಗಿ ಸ್ವಸ್ಥಾನಕ್ಕೆ ಬರುವಾಗ ಆಗುತ್ತಿದ್ದ ರೋಮಾಂಚನ ಅನುಭವಿಸಿದವನಿಗೇ ಗೊತ್ತು!! ಹೀಗಿರುವಾಗ ಈ ಎಲ್ಲವನ್ನೂ ಲೀಲಾಜಾಲವಾಗಿ ನಿಭಾಯಿಸುತ್ತಿದ್ದ ಡ್ರೈವರ್ ಗಳು ಅತಿಮಾನುಷರೆಂದು ಅನಿಸಿ ಅವರೇ ನಮ್ಮ ಹೀರೋಗಳಾಗಿದ್ದಿದ್ದುದು ಸಹಜವೇ ಅಲ್ಲವೇ.

ಬರೀ ಕೆಂಪು ಬಸ್ಸುಗಳನ್ನೇ ನೋಡಿದ್ದ ನಮಗೆ ರಸದೌತಣ ಉಣಬಡಿಸಿದ್ದು ನಮ್ಮೂರಿಗೆ ನಂತರ ಕಾಲಿಟ್ಟ ಬಣ್ಣಬಣ್ಣದ ಸವ್ಕಾರಿ ಬಸ್ಸುಗಳು. ಹಣೆಯ ಮೇಲೊಂದು ಹೆಸರನ್ನೂ ಹೊತ್ತಿರುತ್ತಿದ್ದ ಇವು ನಮ್ಮೂರಿಗೆ ಬಂದಾಗ ನಮ್ಮ ಭಾಗ್ಯದ ಬಾಗಿಲೇ ತೆರೆಯಿತು ಅನ್ನುವಷ್ಟರ ಮಟ್ಟಿಗೆ ಖುಷಿ ಪಟ್ಟಿದ್ದು ಮಾತ್ರಾ ನಾವುಗಳೇ. ಆಗ ಬರುತ್ತಿದ್ದ ಬಸ್ಸುಗಳಲ್ಲಿ ಒಂದು BMS ಮತ್ತೊಂದು SBMS. ನಂತರ ಅದೇನೋ ಆಗಿ BMS ಬರೋದನ್ನು ನಿಲ್ಲಿಸಿದಾಗ ನಾವಾಗ ಅದಕ್ಕೆ ಹಿಡಿಶಾಪ ಹಾಕಿದ್ದಿದೆ. BMS ಅಂದ್ರೆ ಅದ್ಯಾವುದೋ ಮೋಟರ್ ಸರ್ವೀಸ್ ಅಂದಾಗಿತ್ತು ನಮ್ಮ ಸಿಟ್ಟಿಗೆ ಸಿಲುಕಿದ್ದ ಅದು ಬಾರೋ ಮಿ*****... ಸೂ***ನೇ ಆಗಿತ್ತು (ಇದು ನಮಗಿಂತ ಸ್ವಲ್ಪ ದೊಡ್ಡವನಾಗಿದ್ದ ನಮ್ಮಣ್ಣನ ಕಿತಾಪತಿ). ಕೊನೆಗೆ ಆ ಬಸ್ಸು ಮತ್ತೆ ನಮ್ಮೂರಿಗೆ ಬಂತೋ ಇಲ್ಲವೋ ನೆನಪಿಲ್ಲ.

ಬರುಬರುತ್ತಾ ಬಸ್ಸುಗಳ ಸಂಖ್ಯೆ ಹೆಚ್ಚಾದುದ್ದಕ್ಕೂ ಅಥವಾ ನಾವುಗಳು ಬಾಲ್ಯದಿಂದ ಪ್ರೌಡಾವಸ್ಥೆ ಕಡೆಗೆ ನೆಡೆದುದ್ದಕ್ಕೂ ಬಸ್ಸಿನ ಬಗ್ಗೆಅಷ್ಟೇನೂ ನಮ್ಮ ಉತ್ಸಾಹ ಕಡಿಮೆಯಾದದ್ದು ನಿಜ. ಈಗ ತರತರದ ಬಸ್ಸುಗಳು ಕಣ್ಣಿಗೆ ಬಿದ್ದರೂ ಮನಸ್ಸಿನಲ್ಲಿ ಬಾಲ್ಯದ ಆ ಕೆಂಪು ಬಸ್ಸು, ಆ ಅಶೋಕ್ ಲೇಲ್ಯಾಂಡ್ ಮಾತ್ರ ಅಚ್ಚಳಿಯದಂತೆ ಉಳಿದುಬಿಟ್ಟಿವೆ!!

Friday, July 1, 2016

ಕಾಣೆಯಾಗೋಣ ಬಾ!!

ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಹೊಸ ತೊಂದರೆಗಳು ಹುಟ್ಟುತ್ತಾ ಇರುತ್ತಾ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕೆಲವೊಬ್ಬರಿಗೆ ಒಮ್ಮೊಮ್ಮೆ ತಾವು ಜಗತ್ತಿನಲ್ಲಿ ಇದ್ದೂ ಇಲ್ಲದ ಹಾಗೆ ಇರಬೇಕು ಅನ್ನಿಸೋದು ಸಹಜ. ಬೇರೆಯವರಿಗೆ ಅನಿಸುತ್ತೋ ಇಲ್ಲವೋ ನನಗಂತೂ ಹಲವು ಬಾರಿ ಅನಿಸಿದೆ. ಈಗ್ಗೆ ಒಂದು ಇಪ್ಪತ್ತು ವರ್ಷಗಳ ಹಿಂದೆ ಬಹು ಸುಲಭವಾಗಿ ಈ ರೀತಿಯ ಜೀವನ ನೆಡೆಸಬಹುದಿತ್ತೇನೋ ಆದರೆ ಇವತ್ತಿನ ಮಟ್ಟಿಗೆ ಅದು ಕಷ್ಟ ಸಾಧ್ಯ! ಅದೂ ನಮ್ಮ ಡಿಜಿಟಲ್ ಹೆಜ್ಜೆ-ಗುರುತು ಗಳನ್ನ ಅಳಿಸಿ ಹಾಕುವುದು ಬಹು ಕಷ್ಟದ ವಿಚಾರ. ನಾವು ಅದ್ಯಾವುದೋ ವೆಬ್ ತಾಣದಲ್ಲಿ ಅಭಿಪ್ರಾಯಿಸಿರುತ್ತೇವೆ, ಮತ್ತೊಂದು ವೆಬ್'ತಾಣದಲ್ಲಿ ನಮ್ಮದೊಂದು ಪರಿಚಯ ಪುಟವನ್ನು ಸೃಷ್ಟಿಸಿಬಿಟ್ಟಿರುತ್ತೇವೆ, ಇನ್ನ್ಯಾವುದೋ ವೆಬ್ ತಾಣದಲ್ಲಿ ಅದೇನೋ ವಸ್ತುವನ್ನು ಕೊಂಡು ಅದರ ಬಗ್ಗೆ ನಮ್ಮ ಅನಿಸಿಕೆಗಳನ್ನ ಹಂಚಿರುತ್ತೇವೆ. ಒಮ್ಮೆ ವೆಬ್ ತಾಣವೊಂದರಲ್ಲಿ ಏನನ್ನೋ ಬರೆದು ಅದು ನಮ್ಮ ಖಾಸಗಿತನಕ್ಕೆ ದಕ್ಕೆಯಾಗುತ್ತಿದೆಯೆಂದೂ ಹುಲುಬುವುದು ಸರಿಯಲ್ಲವಾದರೂ ಒಮ್ಮೆಮ್ಮೆ ಇದು ಅತಿಯಾದಾಗ ನಮಗೆ ಒಂದು ಥರ ಕಿರಿಕಿರಿ ಯಾಗುವುದು ಸಹಜ. ಅದರಲ್ಲೊಂದು ಈ ಹುಡುಕುತಾಣಗಳು (search engines) ನಮಗೇ ಗೊತ್ತಿರದೇ ಅದ್ಯಾವುದೋ ಜಾಲತಾಣದಲ್ಲಿದ್ದ ನಮಗೆ ಸಂಬಂಧಿಸಿದ ಮಾಹಿತಿಯನ್ನು ಪಟ್ಟಿ ಮಾಡುವುದು. ಹೊಸದರಲ್ಲಿ ನಾನೂ ಹೀಗೆ ಸಿಕ್ಕ ವೆಬ್'ತಾಣಗಳಲ್ಲಿ ಹೆಸರು ನೊಂದಾಯಿಸಿ, ನನ್ನದೇ ವೆಬ್'ಪುಟಗಳನ್ನು ಸೃಷ್ಟಿಸಿ ಕೊನೆಗೊಂದು ದಿನ ನನ್ನ ಮೇಲೆ ನನಗೇ ಜಿಗುಪ್ಸೆ ಬಂದು ಎಲ್ಲವನ್ನೂ ಅಳಿಸಿಹಾಕಿದ್ದಿದೆ! 

ಈಗ ಯಾರೋ ಒಬ್ಬನ್ನನ್ನು ಊಹಿಸಿಕೊಳ್ಳಿ, ಅವನಿಗೆ ತಾನು ಈ ಡಿಜಿಟಲ್ ಜಗತ್ತಿನಿಂದ ಪೂರ್ತಿ ಕಾಣೆಯಾಗಿ ಹೋಗಿಬಿಡಬೇಕು ಅನಿಸಿಬಿಡುತ್ತೆ, ಕಡೇಪಕ್ಷ ಈ ಹುಡುಕುತಾಣಗಳಿಂದವಾದರೂ ಮರೆಯಾಗಬೇಕು ಅನಿಸಿಬಿಡುತ್ತೆ ಅಂತ ಅಂದುಕೊಳ್ಳಿ. ಆಗ ಅವನೇನು ಮಾಡಬೇಕು. ಇದಕ್ಕೆಂದೇ ಜಗತ್ತಿನ ಕೆಲವೆಡೆ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಈಗಾಗ್ಲೇ ಜರ್ಮನಿ, ಸ್ಪೇನ್, ಅರ್ಜೆಂಟೀನಾ, ಅ. ಸಂ. ಸಂ.  ದಂತಹ ದೇಶಗಳೂ, ಯುರೋಪಿಯನ್ ಒಕ್ಕೂಟವೂ  ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಇಂತಹ ಕಾನೂನುಗಳನ್ನು ಉಪಯೋಗಿಸಿಕೊಂಡು ಈ ಹುಡುಕುತಾಣಗಳಿಗೆ ನಮ್ಮ ಡಿಜಿಟಲ್ ಕುರುಹುಗಳು ಪಟ್ಟಿಯಾಗದಂತೆ ಮಾಡಬಹುದು. ನಮ್ಮಲ್ಲಿ ಈ ತರಹದ ಕಾನೂನು ಇಲ್ಲವಾದರೂ ಕೋರ್ಟ್'ಗಳ ನಿರ್ದೇಶನಗಳ ಮೂಲಕ ಹುಡುಕು ತಾಣ ಕಂಪನಿಗಳಿಗೆ ವಿನಂತಿಸಿಕೊಳ್ಳಬಹುದು. ಇತ್ತೀಚಿಗೆ ನಾನು ಈಗಿರುವ ರಷ್ಯದಲ್ಲೂ ಈ ತರದ ಕಾನೂನು ಒಂದನ್ನು ತರಲಾಗಿದೆ (ಜನರನ್ನು ಇದ್ದಕ್ಕಿದಂತೆಯೇ ಕಾಣೆ ಮಾಡಿಸುವುದರಲ್ಲಿ ಹಿಂದೊಮ್ಮೆ ಕುಖ್ಯಾತಿ ಪಡೆದಿದ್ದ ಸೋವಿಯತ್ ಒಕ್ಕೂಟದ ಮಾತೃ ದೇಶವಾಗಿರೋ ರಷ್ಯ ದಲ್ಲಿಯೇ ಈ ತರದ ಒಂದು ಕಾನೂನು ಬೇಕಾಗಿದೆ ಅಂದ್ರೆ ಈ ಹುಡುಕು ತಾಣಗಳ ಕಬಂಧ ಬಾಹುಗಳು ಅದೆಷ್ಟು ಬಲಿಷ್ಠ ಅನ್ನೋದನ್ನ ಊಹಿಸಿ ). ಇದರ ಹೆಸರು "right to be forgotten" ಎಂದಾಗಿದ್ದು ಇದರಿಂದ ರಶಿಯಾದ ಪ್ರಜೆಗಳಿಗೆ ಹುಡುಕುತಾಣಗಳಿಂದ ತಮಗೆ ಸಂಬಂಧಿಸಿದ ಮಾಹಿತಿಯನ್ನು ಪಟ್ಟಿ ಮಾಡದೇ ಇರುವಂತೆ ನಿರ್ದೇಶನ ನೀಡುವ ಹಕ್ಕನ್ನು ನೀಡಲಾಗಿದೆ (ರಷಿಯ ಗೆ ಸಂಬಂದಿಸಿದ ಸರ್ವರ್'ಗಳಿಂದ). ಇದರಲ್ಲೂ ಹಲವು ಕರಾರುಗಳಿದ್ದು, ಅಪರಾಧಿ ಹಿನ್ನಲೆಯವರಿಗೆ, ಹಿಂದೆ ಶಿಕ್ಷೆಯಾಗಿರುವವರಿಗೆ ಈ ಹಕ್ಕು ಲಾಗೂ ಆಗುವುದಿಲ್ಲ. ಸರ್ಕಾರೀ ನೌಕರಿದಾರರು ತಮ್ಮ ಆದಾಯಕ್ಕೆ ಸಂಬಂದಿಸಿದ ದಾಖಲೆಗಳಿಗೆ ಸಂಪರ್ಕಿಸುವ ಜಾಲತಾಣಗಳನ್ನು ಪಟ್ಟಿ ಮಾಡದಿರುವಂತೆ ವಿನಂತಿಸುವಂತಿಲ್ಲ. ಈ ಕಾನೂನಿನ ಪ್ರಕಾರ ಹುಡುಕುತಾಣಗಳು ವಿನಂತಿಸಿದ ಹತ್ತು ದಿನದೊಳಗಾಗಿ ಮೂಲಮಾಹಿತಿಯಿರುವ ಜಾಲತಾಣಗಳಿಗೆ ಸಂಪರ್ಕ ನೀಡುವ ಯಾವುದೇ ಜಾಲಕೊಂಡಿಗಳನ್ನು ಪಟ್ಟಿ ಮಾಡುವಂತಿಲ್ಲ. ಸರಳವಾಗಿ ಹೇಳಬೇಕಾದರೆ ಅರ್ಜಿದಾರರ ಹೆಸರನ್ನು ಗೂಗಲ್'ನಂತಹ ಹುಡುಕುತಾಣಗಳಲ್ಲಿ ಹುಡುಕಿದರೆ ಸದರಿ ವ್ಯಕ್ತಿಗೆ ಸಂಬಂದಿಸಿದ ಮಾಹಿತಿಯಿರುವ ಯಾವುದೇ ಜಾಲತಾಣ ಪಟ್ಟಿಯಾಗುವುದಿಲ್ಲ. 

ಇದು ಸರಿ, ನಮ್ಮನ್ನು ಗೂಗಲ್'ನಿಂದ ಅಂತೂ ಮರೆಮಾಚಬಹುದು ಆದರೆ ಡಿಜಿಟಲ್ ಜಗತ್ತಿನಲ್ಲಿರುವ ನಮ್ಮೆಲ್ಲ ಮಾಹಿತಿಯನ್ನು ಒಂದೇ ಬಾರಿಗೆ ಅಳಿಸಿಹಾಕುವಂತೆ, ಆ ಮೂಲಕ ನಾವು ಡಿಜಿಟಲ್ ಜಗತ್ತಿನಿಂದ ಕಾಣೆಯಾಗಿ ಹೋಗುವ ಹಾಗೆ ಮಾಡುವ ಸಾಧ್ಯತೆಗಳು ಇನ್ನೂ ಬರಬೇಕಿದೆ.