ಕೆಲವೊಂದು ಸಲ ಭಾಷೆ ಅನ್ನೋದು ಎಷ್ಟು ಮುಖ್ಯ ಅಂತ ಗೊತ್ತಾಗಬೇಕಾದರೆ, ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಹೋಗಬೇಕು. ನಮ್ಮ ದೇಶದಲ್ಲಿ ಹೆಂಗೆಂಗೋ ಮಾಡಿ ಸಂವಹನ ಮಾಡಿಬಿಡ್ತಿವಿ (ತಮಿಳುನಾಡು ಬಿಟ್ಟು). ಆದರೆ ಒಂದು ಸಲ ದೇಶ ಬಿಟ್ಟ್ವಿ ಅಂದ್ರೆ ಮುಗಿದು ಹೋಯ್ತು. ಅದರಲ್ಲೂ, ನೀವು ಯುರೋಪಿಯನ್ ದೇಶಗಳಿಗೋ (UK ಬಿಟ್ಟು), ಆಫ್ರಿಕಾ ಕ್ಕೊ, ಜಪಾನ್ ಗೋ ಹೋದ್ರಿ ಅಂದ್ರೆ ಮುಗಿದೇ ಹೋಯ್ತು ನಿಮ್ಮ ಕಥೆ. ಈಗ ನಾ ಹೇಳೋಕೆ ಹೊರಟಿರೋದು ಅಂತದೇ ಒಂದು ಕಥೆ (ಸುಮಾರು ಇವೆ, ಆದ್ರೆ ಸದ್ಯಕ್ಕೆ ಒಂದು ಸಾಕು).
ರಷಿಯದಲ್ಲಿ ಜನ ಜಪ್ಪಯ್ಯ ಅಂದ್ರೂ ಒಂದೇ ಒಂದು ಪದ ಆಂಗ್ಲ ಭಾಷೆ ಮಾತಾಡೋಲ್ಲ ಅಂತಾರೆ. ಪಾಪ ಬಂದರೆ ತಾನೇ ಮಾತಾಡೋಕೆ. ನಾವು ಏನೇ ಆಂಗ್ಲ ಭಾಷೆನಲ್ಲಿ ಮಾತಾಡಿದ್ರೂ ಅದು ಅರಣ್ಯರೋಧನ ಅಷ್ಟೇ!! ಮಾಸ್ಕೋ ಗೆ ಬಂದ ಹೊಸದರಲ್ಲಿ ನನಗಂತೂ ತೆಲೆ ಕೆಟ್ ಹೋಗಿತ್ತು. ಎಲ್ಲಾ ಮಾಹಿತಿ ರಷ್ಯನ್ ನಲ್ಲೆ ಇರುತ್ತೆ. ಸಧ್ಯ ಸಂಖ್ಯೆಗಳು ಮಾತ್ರ ಹಿಂದೂ-ಅರೇಬಿಕ್ (ನಿಜವಾಗಿಯೂ ಅವು ನಮ್ಮ ಹೀರೀಕರು ಕಂಡುಹಿಡಿದ ಸಂಖ್ಯೆಗಳೇ, ಅರೇಬಿಯನ್ಗಳು ಕದ್ದು ಅದನ್ನೇ ಹಿಂದೂ-ಅರೇಬಿಕ್ ಅಂತ ಮಾಡಿದ್ದು ಬೇರೆ ವಿಷಯ). ಏನೋ ಅದೊಂದು ಕಾರಣದಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆ, ಸೂಪರ್ ಮಾರ್ಕೆಟ್ ನಲ್ಲಿ ಹಣ ಕೊಡುವಾಗ ತೊಂದರೆ ಆಗೋಲ್ಲ. ಆದರೆ ನಿಮಗೆ ಮೊದಲೇ ನೀವು ಇಳಿಯುವ ಸ್ಥಳ ಚೆನ್ನಾಗಿ ಗೊತ್ತಿರಬೇಕು ಇಲ್ಲ ಅಂದ್ರೆ ಕಥೆ ಮುಗಿದಂತೆಯೇ. ನಾನು ಏನೋ ಹೇಳೋಕೆ ಹೋಗಿ ಮತ್ತಿನ್ನನೀನೋ ಶುರು ಮಾಡಿಬಿಟ್ಟೆ. ಈಗ ವಿಷಯಕ್ಕೆ ಬರೋಣ. ಇಲ್ಲಿ ಸಿಕ್ಕಾಪಟ್ಟೆ ಚಳಿ ಹವೆ ಇರ್ರೋದ್ರಿಂದ ಚರ್ಮ ಒಡೆದು ಕಡಿಯೋಕೆ ಶುರು ಆಗುತ್ತೆ. ನಾನೂ ಬೆಂಗಳೂರಿಂದ ಬರುವಾಗ vaselline ಅಥವಾ moisturizer ತರಲಿಲ್ಲ. ನನ್ನ ಚರ್ಮ ಒಡೆದು ಕಡಿಯೋಕೆ ಶುರು ಆಯಿತು. ಏನ್ ಮಾಡಲಿ, ಅಂಗಡಿಗೆ ಹೋಗಿ ಏನ್ ಅಂತ ಕೇಳೋದು? ಭಾಷೆ ಬರೋಲ್ಲವೇ. ನನ್ನ ಕೆಲವು ರಷ್ಯನ್ ಸಹೋದ್ಯೋಗಿಗಳಿಗೆ ಆಂಗ್ಲ ಭಾಷೆ ಬರುತ್ತಿತ್ತದರೂ ಅವರಿಗೇಕೆ ಸುಮ್ಮನೆ ತಾಪತ್ರಯ ಅಂದು ಕೇಳುವ ಮನಸಾಗಲಿಲ್ಲ. ನನ್ನ ವಸತಿ ಸಮುಚ್ಚಯದ ಹತ್ತಿರವೇ ಒಂದು ಬಹುದೊಡ್ಡ supermarket ಇದೆಯಾದರೂ ಅಲ್ಲಿ ಎಲ್ಲವೂ ರಷ್ಯನ್ ಮಯ. ಅಲ್ಲಿ ನನ್ನ ಗೂಗಲ್ translator ಬೇರೆ ಕೆಲಸ ಮಾಡೋಲ್ಲ (ಸಿಕ್ಕಾಪಟ್ಟೆ ಜನಜಂಗುಳಿ ಇಂದ ನೆಟ್ವರ್ಕ್ ಸಮಸ್ಯೆ). ಕೊನೆಗೆ ನಾನೇ ಹುಡುಕಿ ಬಿಡುವ ಅಂತ ಹೊರಟೆ. ಅಲ್ಲಿಗೆ ನಾನು ಅವಾಗವಾಗ ಹೋಗ್ತಾ ಇರ್ತೇನೆ. ಹೋಗಿ ಹುಡುಕಲು ಶುರು ಮಾಡಿದೆ, ನೂರೆಂಟು ಕ್ರೀಂ ಗಳು ಇವೆ ಆದರೆ ಅದರಲ್ಲಿ ನನಗೆ ಬೇಕಾದದ್ದು ಯಾವುದು ಅಂತ ಹೆಂಗೆ ಗೊತ್ತಾಗುತ್ತೆ. ಪೊಟ್ಟಣದ ಮೇಲಿನ ಮಾಹಿತಿ ಎಲ್ಲ ರಷ್ಯನ್ ನಲ್ಲೆ ಇರುತ್ತೆ. ಹುಡುಕಿ ಹುಡುಕಿ ಸೋತೆ, ಸಮಯವಾಯಿತೆಂದು ವಾಪಾಸ್ ಬಂದೆ. ಅದರ ಮಾರನೆ ದಿನ, ಇವತ್ತು ತೆಗೆದುಕೊಳ್ಳಲೇ ಬೇಕು ಅಂತ, ಕೋಣೆಯಲ್ಲಿಯೇ ಕುಳಿತು ಸ್ವಲ್ಪ ಸಂಶೋಧನೆ ಮಾಡಿ ಹೊರಟೆ. ಇಲ್ಲಿ ಸಿಗಬಹುದಾದ ಕೆಲವೊಂದು ಕ್ರಿ೦ ಗಳ ಪೊಟ್ಟಣ ದ ಫೋಟೋ ಜಾಲತಾಣಗಳಿಂದ ನನ್ನ ಪುಟ್ಟ ಮೊಬೈಲ್ ಫೋನ್ ನಲ್ಲಿ ಇಳಿಸಿಕೊ೦ಡು ಹೋದೆ. ಆದರೆ ಅಲ್ಲಿ ಮತ್ತದೇ ಹಣೆಬರಹ. ನಾನು ತೆಗೆದು ಕೊಂಡ ಹೋದ ಫೋಟೋ ದಲ್ಲಿ ಇರುವ ಯಾವ ಕ್ರಿ೦ ಕೂಡ ಅಲ್ಲಿರಲಿಲ್ಲ. ಅಲ್ಲಿರೋರನ್ನ ಕೇಳಿದರೆ, ಪಾಪ ಅವಕ್ಕೆ ನಾನು ಏನನ್ನ ಕೇಳ್ತಾ ಇದೀನಿ ಅಂತಾನೆ ಗೊತ್ತಾಗ್ತಾ ಇಲ್ಲ. ಏನ್ ಮಾಡೋದು ಅಂತ ಅತ್ಲಿಂದ ಇತ್ಲಾಗೆ, ಇತ್ಲಿಂದ ಅತ್ಲಾಗೆ ಅಲೀತ ಇದ್ದೆ. ಆಗ ಕಾಣಿಸ್ತು ನೋಡಿ ಒಂದು ಪೊಟ್ಟಣ ಮೂಲೆಯಲ್ಲಿ, ನಮ್ಮ ದೇಶದ್ದು, ಆದರ ಬಣ್ಣ, ಡಿಸೈನ್ ನೋಡೇ ಗುರುತು ಹಿಡಿದು ಬಿಟ್ಟೆ, ನಮ್ BORO PLUS. ಒಂತರ ಸ್ವರ್ಗನೇ ಧರೆಗೆ ಇಳಿದಂತೆ ಆಯ್ತು ಆ ಕ್ಷಣ. ನಂಗೆ ಬೇಕಾಗಿದ್ದು ಸಿಗದೇ ಹೋದರೂ. ಅದರಿಂದ ತಕ್ಕಮಟ್ಟಿಗೆ ಕೆಲಸ ಆಗ್ತಾ ಇದ್ದಿದ್ದರಿಂದ ತೆಗೊಂಡು ಬಂದೆ. ಅದರ ಮುಂದಿನ ವಾರ ನನ್ನ ಭಾರತೀಯ ಸಹೋದ್ಯೋಗಿಯ ಮನೆಗೆ ಹೋದಾಗ (ಅವನದ್ದು ನನ್ನ ವಸತಿ ಸಮುಚ್ಚಯದಿಂದ ತುಂಬಾ ದೂರ). ಅವನಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. ಅವನು ಮಾಸ್ಕೋ ದಲ್ಲೇ ಎರಡು ವರ್ಷದಿಂದ ಇದಾನೆ, ಅವನು ಬಂದ ಹೊಸದರಲ್ಲಿ ನನ್ನ ತರಾನೆ ಪರದಾಡಿದ ಕಥೆ ಹೇಳಿಕೊಂಡ. ಇಬ್ಬರೂ ಸಿಕ್ಕಾಪಟ್ಟೆ ನಕ್ವಿ ನಮ್ ಸ್ಥಿತಿ ನೆನೆಸಿಕೊಂಡು. ಆಮೇಲೆ ಒಂದು ಬಾಟಲಿ ತೋರಿಸಿದ, ಅದರ ಚಿತ್ರವನ್ನು ಅಲ್ಲೇ ಕ್ಲಿಕ್ಕಿಸಿ save ಮಾಡಿಕೊಂಡೆ. ನನ್ನ ಕೋಣೆ ಬರೋ ದಾರೀಲಿ ಅದೇ supermarket ಗೆ ಹೋಗಿ ಅಲ್ಲಿರೋ salesman ಗೆ ತೋರಿಸಿದಾಗ ಅವ್ನು ಅದು ಇರೋ ಸ್ಥಳ ತೋರಿಸಿದ.. ಹೀಗೆ ಮುಗೀತು ನನ್ನ ಒಂದು moisturizer ಪುರಾಣ.
ಇಂತಹ ಅದೆಷ್ಟೋ ವಿಚಾರ ದಿನವೂ ನಡಿತ ಇರುತ್ತೆ. ಇವರ ಭಾಷಾಭಿಮಾನವನ್ನು ನಾವು ನೋಡಿ ಕಲಿಯೋದು ಸಾಕಷ್ಟಿದೆ!!
No comments:
Post a Comment