Thursday, August 30, 2012

Nandanavana

ಇಂದು ಅವನನ್ನು ನೆನೆಸಿಕೊಂಡೆ, ಅವನು ಹಾಗೂ ನಾನು ಜೊತೆಯಲ್ಲೇ ಇದ್ದೆವು. ಆದರೆ, ಕೆಲವೊಂದು ಕಾರಣಗಳಿಂದ ಅವನು ನನ್ನಿಂದ ದೂರವಾದ. ಅವನು ತನ್ನ ಡಿಗ್ರಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಹೋಗಬಾರದಿತ್ತು. ಅವನಿಗೇನು ಕಷ್ಟವಿತ್ತೋ ನಾನು ಬಲ್ಲವನಲ್ಲವಾದ್ರೂ ಅವ್ನು ಇನ್ನಷ್ಟು ತಾಳ್ಮೆ ವಹಿಸಿದ್ದರೆ ಒಳ್ಳೇದಿತ್ತು. ಈಗ ಅವನು ಇಲ್ಲಿಗಿಂತ ಚೆನ್ನಾಗೆ ಇರಬಹುದು. ಆದರೂ ಅವ್ನು ಉಗುರಲ್ಲಿ ಹೋಗೋ ಹುಲ್ಲು ಕಡ್ಡಿಗೆ ಕೊಡಲಿ ತಗೊಂಡ. ಅವನು ಇಂತ ತೀರ್ಮಾನಕ್ಕೆ ಬರೋ ಹಾಗೆ ಮಾಡಿದ ವಿಷಯವೇನಾದರೂ ಇರಬಹುದು? ನನ್ನ ಬಹು ಕಾಲದ ಸ್ನೇಹಕ್ಕೆ ಬೆಲೆ ಕೊಟ್ಟಿದ್ದಾರೆ ಅವನು ಹೋಗುವ ಮೊದಲು ನನಗೆ ಒಂದು ಮಾತನ್ನು ಹೇಳುತಿದ್ದ. ಆದರೆ ನನ್ನಲ್ಲಿ ಅವನಿಗೆ ನಂಬಿಕೆ ಹೋಗಿತ್ತು ಅನಿಸುತ್ತದೆ. ಹಾಗೆನಿಸಿದರಲ್ಲಿ ಅವನದೇನೂ ತಪ್ಪಿಲ್ಲ. ನನ್ನ ಸ್ವಭಾವವೇ ಒಂದು ವಿಚಿತ್ರ, ಯಾವಾಗ ಯಾರು ಬೇಡವಾಗ್ತಾರೆ ಅನ್ನೋದು ನನಗೇ ಗೊತ್ತಿರೋಲ್ಲ. ಹೋಗಲಿ ಬಿಡಿ ಈಗ ಅವನು ನೆನಪಗಿದ್ದಾದರೂ ಯಾಕೆ?

ಹೀಗೆಯೇ ನನ್ನ ಕಿರಿಯ ಸಹೋದ್ಯೋಗಿಯ  ಜೊತೆ ಅದೂ ಇದೂ ಮಾತಾಡ್ತಾ ನಮ್ಮ NITK students co-op strores ಎದುರು ನಿಂತಿದ್ದೆ. ಆಗ ನಮ್ಮ ಹೊಸ ಕಟ್ಟಡದ ಯಾವುದೊ ಒಂದು ಅಂತಸ್ತಿನ ಕೋಣೆಯೊಂದರ ಫಾಲ್ ಸೀಲಿಂಗ್ ಗಳು ನನ್ನ್ನನ್ನು ಅಣಕಿಸಿದವು, ಹಾಗೆಯೇ ಅಲ್ಲಿಯೇ ಕೊಡಲಾಗಿದ್ದ ಹಾವಿನಂತಹ ಅರ್ಥಿಂಗ್ ಪಾಯಿಂಟ್ ನನ್ನನ್ನು ಅಶಾಂತಿ ಗೆ ದೂಡಿತು. ನಮ್ಮ ವಿಭಾಗದಲ್ಲಿ ನಾವೆಂದರೆ (ಕೆಲವೊಬ್ಬರು) ಒಂದು ಥರ ದಲಿತರ ಹಾಗೆ ತುಳಿತಕ್ಕೆ ಒಳಗಾಗಿರುವ ವರ್ಗ. ನಾವು ಏನನ್ನು ಕೇಳಿದರು ನಮ್ಮ ಮಾತಿಗೆ  ಕವಡೆ ಕಾಸಿನ ಕಿಮ್ಮತ್ತಿಲ್ಲ. ಆದರೆ ಕೆಲವೊಂದು ಪಾಳೆಗಾರರ ಪಳೆಯುಳಿಕೆಗಳು ಕೇಳಿದ್ದೆಲ್ಲ ದಕ್ಕಿಬಿಡುತ್ತದೆ. ಅವರಿಗೆ ಬೇಕಾಗಿದ್ದೆಲ್ಲವು ಅವ್ರಿಗೆ ಸಿಕ್ಕಿಬಿಡುತ್ತದೆ. ನಮಗೆ ಚಿಕ್ಕನಾಯಕನಹಳ್ಳಿ ಚಿಪ್ಪೇ ಗತಿ. ನಾವು ನಮ್ಮ ಪ್ರಯೋಗಲಯಕ್ಕೆಂದೇ ಪ್ರತ್ಯೇಕ ಏರ್ಥಿಂಗ್ ಪಾಯಿಂಟ್ ಕೇಳಿದಾಗ ನಿರಾಕರಿಸಿದರು. ಮುಂದುವರೆದು "ನಿಮ್ಮ ಕಟ್ಟಡದಲ್ಲಿ ಇರುವರಿಗೆಲ್ಲರಿಗೂ ಒಂದೇ ಏರ್ಥಿಂಗ್ ಕೊಟ್ಟಿದ್ದೇವೆ, ಅದಕ್ಕೆಂದೇ ಕಟ್ಟಡದ ಮೂಲೆ ಮೂಲೆ ಯಲ್ಲಿ ದಪ್ಪನೆಯ ತಾಮ್ರದ ಪಟ್ಟಿಯನ್ನೂ ಹಾಕಿದ್ದೇವೆ ನೀವು ಅದನ್ನೇ ಬಳಸಬೇಕು" ಎಂದು ಹೇಳಿದವರು ಕೆಲವೊಬ್ಬರಿಗೆ ಮಾತ್ರ ಪ್ರತ್ಯೇಕ 
ಏರ್ಥಿಂಗ್ ಅನ್ನು ಕೊಡುತ್ತಾರೆಂದರೆ ಬೇಜಾರಾಗುತ್ತದೆ. ಕೆಲವೊಬ್ಬರು ಗಣಕಯಂತ್ರ ಪ್ರಯೋಗಾಲಯಕ್ಕೆಂದು ಮೀಸಲಾಗಿಟ್ಟಿದ್ದ  ಕೋಣೆಯನ್ನು ಉಪಾಯವಾಗಿ ತಮಗೇ ಬೇಕು ಎಂದಾಗಲೂ ಯಾರೂ ಮಾತನಾಡಲಿಲ್ಲ. 

ನನಗೀಗ ದಲಿತ ವರ್ಗದವರು ಅನುಭವಿಸಿದ್ದ ಕಷ್ಟ ಕಾರ್ಪಣ್ಯಗಳು ಒಂದೊಂದಾಗಿ ಅರ್ಥವಾಗುತ್ತಲಿವೆ. ಅವರಿಗೂ ಹೀಗೆಯೇ ತುಳಿಯಲಾಗಿತ್ತು. ಒಂದು ಸಾರಿ ಹೀಗೆಯೇ ಮಾತನಾಡುತ್ತಿರುವಾಗ  (ನಮ್ಮ ವಿಭಾಗ ಹೊಸ ಕಟ್ಟಡಕ್ಕೆ  ವರ್ಗಾವಣೆಯಾಗುತ್ತಲ್ಲಿತ್ತು) ನಮ್ಮ ಗುರುಗಳಿಗೆ ನಮ್ಮಲ್ಲಿರುವ  UPS ಹಾಗೂ ಬ್ಯಾಟರಿಗಳನ್ನು ಹೊರಗಡೆ ಇಟ್ಟುಬಿಡೋಣ ಆಗ ನಮಗೆ ಸ್ಥಳದ ಉಳಿಯುತ್ತೆ ಎಂದಾಗ ಅವರು ಹೌಹಾರಿ ಅದೆಲ್ಲ ಆಗುವುದಿಲ್ಲವೆಂದೂ, ನಮ್ಮ ಮುಖ್ಯಸ್ಥರು ಕಟ್ಟಡದ ಸೌಂದರ್ಯಕ್ಕೆ ದಕ್ಕೆಬರುತ್ತದೆನ್ನುವರೆಂದೂ ಕಾರಣ ಕೊಟ್ಟರು. ಆದರೆ ಪಾಳೆಗಾರರು ತಮ್ಮ ಬ್ಯಾಟರಿ ಮತ್ತು UPS ಗಳನ್ನೂ ಹೊರಗಡೆ ಇಟ್ಟಾಗ ಏನೂ ಮಾತನಾಡದೆ ಹೋದರು. ಅದರ ಮುಂದುವರೆದ ಭಾಗವಾಗಿ ಬ್ಯಾಟರಿಗಳಿಂದ ಬರುವ ಕೆಟ್ಟ ಅನಿಲಗಳಿಂದ ರಕ್ಷಣೆಗೆಂದು ಅದಕೊಂದು ಹೊಸ ಕೋಣೆಯನ್ನು ರಚಿಸಲಾಯಿತು. ಇದಕ್ಕೂ  ನಮ್ಮ ಮುಖ್ಯಸ್ಥರ ಸಮ್ಮತಿ ಇತ್ತೆಂದು ಹೇಳಬೇಕಾಗಿಲ್ಲ. ಕೆಲವೊಂದು ಸಾರಿ ಅನ್ನಿಸುತ್ತೆ ನಮಗೆಲ್ಲ ಯಾಕೆ ಬೇಕು ಇದರ ಉಸಾಬರಿ ಆದ್ರೆ ಎಲ್ಲದಕ್ಕೋ ಒಂದು ತಾಳ್ಮೆ ಅನ್ನುವುದು ಇರುತ್ತಲ್ಲವೇ?

ಹಿಂದೊಮ್ಮೆ ಅಂದುಕೊಳ್ಳುತ್ತಿದ್ದೆವು (ಅವನು, ನಾನು ಹಾಗೂ ಮತ್ತಿತರರು), ಈ ಪಾಳೆಯಗಾರರು ಎಷ್ಟು ಮೆರೆಯಬಹುದೋ ಮೆರೆಯಲಿ.  ನಮ್ಮ ಸರದಿ ಬಂದಾಗ ಬೇಕಾದ ಉಪಕರಣಗಳು, ವಸ್ತುಗಳು ಹಾಗೂ ಇನ್ನಿತರ ಕೆಲಸಗಳನ್ನು ಮಾಡಬಹುದೆಂದು. ಆದರೆ ನೀರ ಮೇಲಿನ ಗುಳ್ಳೆಯ ಹಾಗೆ ಎಲ್ಲವೂ ಪಟ್ ಎಂದವು. ಅದೇನೋ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಅಂತಾನೋ ಅಥವ ಕುಂತಿ ಮಕ್ಕಳು ವನವಾಸ ಮುಗಿಸಿದರೂ ರಾಜ್ಯಭಾರ ಮಾಡೋ ಯೋಗ ಇಲ್ಲ ಅಂತಾನೋ ಅಂತಾರಲ್ಲ ಹಾಗಾಯ್ತು ನಮ್ಮ ಪರಿಸ್ಥಿತಿ.  

ಇದೆ ತರಹದ ವಿಷಯಗಳು ಪದೇ ಪದೇ ಮರುಕಳಿಸುತ್ತಿದ್ದರೆ ಎಂತವನನ್ನಾದರೂ ಅಧೀರನನ್ನಾಗಿ ಮಾಡಿಬಿಡುತ್ತವೆ. ಬಹುಶಃ ನನ್ನ ಗೆಳೆಯನಿಗೂ ಹಾಗೆ ಆಗಿರಬೇಕು. ಇಲ್ಲಿ ಐದು ವರುಷವಲ್ಲ, ಐವತ್ತು ವರುಷ ಕಾದರೂ ನಮಗೆ ಸಿಗುವುದು  ಬರೀ ನೋವು, ಅವಮಾನ, ಹಿಂಸೆ, ಜಿಗುಪ್ಸೆ ಎಂದೆನಿಸಿ ಅವನು ಕಠಿಣ ನಿರ್ಧಾರ ತೆಗೆದುಕೊಂಡಿರಬೇಕು. ಒಮ್ಮೆ ಅನಿಸುತ್ತದೆ ಅವನು ಮಾಡಿದ್ದು ಸರಿಯೆಂದು ಆದರೂ, ಇನ್ನೊಮ್ಮೆ ಅವ್ನು ತನ್ನ ನಿರ್ಧಾರವನ್ನು ಪರಿಶೀಲಿಸಬೇಕಿತ್ತು ಎಂದೂ ಎನಿಸುತ್ತೆ.

ಈ ಸಮಾಜವಾದ ಅದೂ ಇದೂ ಎಲ್ಲ ಬೊಗಳೆ. ಯಾವನಿಗೆ ಮತ್ತೊಬ್ಬನನ್ನು ತುಳಿಯುವ ಕಲೆ ಗೊತ್ತಿರುತ್ತೋ ಅವ್ನೆ ಇಲ್ಲಿ ರಾಜ.

ನನ್ನಲ್ಲಿರುವ ಚೈತನ್ಯವಲ್ಲ ಸತ್ತು ಹೋಗಿದೆಯೇನೂ ಎನಿಸುತ್ತೆ. ನನ್ನಲ್ಲೂ ಈಗೀಗ ಅಶಾಂತಿ ಹೊಗೆಯಾಡುತ್ತಿದೆ. ಛೆ.. ನಾ ಕಂಡ ನಂದನವನದ ಕನಸು ನನಸಾಗುವುದಿಲ್ಲವೇನೋ.

Saturday, December 3, 2011

ಆ ದಿನಗಳು

"ಬೆಳಿಗ್ಗೆ, ಚಂಬು ಕೈ ಉಸ್ಕೊಂದು ಬಿದ್ದಾಗಲೇ ಅಂದ್ಕೊಂಡೆ ಯಾರೋ ಬರ್ತಾರೆ ಅಂತಾ" -- ನಮ್ಮ ಚಿಕ್ಕಮ್ಮ ಯಾರ ಹತ್ರನೋ ಹೇಳುತ್ತಾ ಇರೋದನ್ನ ಅಂತ ಇದ್ರೆ ಅಲ್ಲೇ ಆಟ ಆಡ್ತಾ ಇದ್ದ ನಾವೆಲ್ಲಾ ಓಡಿ ಬಂದು ಯಾರು ಬಂದ್ರಮ್ಮ ಯಾರು ಬಂದ್ರಮ್ಮ ಅಂತ ಅವರನ್ನ ಮಾತಾಡೊಕೆ ಬಿಡದೆ ಕೂಗಿ ಕೂಗಿ, ಅಷ್ಟರಲ್ಲಿ ಬಂದವರು ನಮಗೆ ಕಾಣಿಸಿ ಒಯ್.. ಮಾಮ ಬಂದ್ರು, ಮಾಮ ಬಂದ್ರು ಅಂತ ಅವರ ಕೈ ಚೀಲ ಇಸ್ಕೊಂಡು ಮನೆ ಒಳಕ್ಕೆ ಹೋಗ್ತಿದ್ವಿ. ಆ ದಿನಗಳೇ ಚೆಂದ ಅಲ್ಲವ. ಒಳಗಡೆ ಹೋಗಿ ಮೊದಲು ನೋಡ್ತಾ ಇದ್ದಿದ್ದು ಅವರು ತಿನ್ನೋದಿಕ್ಕೆ ಏನು ತಂದಿದ್ದಾರೆ ಅಂತಾ. ಅಕಸ್ಮಾತ್ ಅವ್ರು ಏನೂ ತಂದಿಲ್ಲ ಅಂದ್ರೆ ಮುಖ ಇಳಿ ಬಿಟ್ಟುಕೊಂಡು ಹೊರಗಡೆ ಬರ್ತಾ ಇದ್ವಿ. ಅಷ್ಟರಲ್ಲಿ ತಿನ್ನೋದಿದ್ರೆ ಏನಾದರೂ ಕೊಡೊ, ಏನಾದರೂ ಕೊಡೊ ಅನ್ನೋ ನಮ್ಮ ಇತರೆ ಸ್ನೇಹಿತರು. ಕೊನೆಗೆ ಎಲ್ಲರಿಗೂ ತಿನ್ನೋದಿಕ್ಕೆ ಏನೂ ಸಿಕ್ಕಿಲ್ಲವಲ್ಲ ಅಂತಾ ಬೇಜಾರಾಗಿ, ಆ ಬೇಜಾರು ಸಿಟ್ಟಾಗಿ ಪರಿವರ್ತನೆಯಾಗಿ ಮಾಮ ನ ಮೇಲೆ ಒಂದು ಹಾಡನ್ನೇ ಹೇಳೋದಿಕ್ಕೆ ಶುರು ಮಾಡ್ತಾ ಇದ್ವಿ. ಕಾಗಿ ಕಾಗಿ ಕವ್ವಾ.. ಯಾರು ಬಂದಾರವ್ವಾ?.. ಮಾವ ಬಂದಾನವ್ವ.. ಏನ್ ತಂದನವ್ವ.. ಹ೦ಡೆವನಂತ ---- ಬಿಟ್ಕೊಂಡು ಹಂಗೆ ಬಂದನವ್ವ... ಕೊನೆಗೆ ಜೋರಾಗಿ ನಗ್ತಾ ಇದ್ವಿ.. ಹೀಗೆ ನಗ್ತಾ ನಗ್ತಾ ಹಾಡ್ತಾ ಆಗಿರೋ ಬೇಸರ ಎಲ್ಲ ಕಳದೆ ಹೋಗ್ತಿತ್ತು...

ಎಲ್ಲಿ ಹೋದವು ಆ ದಿನಗಳು.. ಮನೆಗೆ ಯಾರದ್ರೂ ಬಂದ್ರು ಅಂದರೆ ಅದನ್ನು ಯಾವ ರೀತಿ ಖುಷಿಯಿಂದ ಹೇಳಿಕೊಳ್ಳುತ ಇದ್ರು ನಮ್ಮ ಜನ. ಅದರಲ್ಲೂ ನಮ್ಮ ಅಜ್ಜಿಗೆ ಇದ್ದಿದ್ದು ದೊಡ್ಡ ಕುಟುಂಬ ಹಾಗಾಗಿ ದಿನಾ ಯಾರದ್ರೂ ಬರ್ತಾನೆ ಇರುತ್ತಾ ಇದ್ರು . ನಮಗೆ ದಿವ್ಸಾ ಏನಾದರೂ ತಿನ್ನೋಕೆ ಸಿಕ್ತಾ ಇತ್ತು. ಆಮೇಲೆ ದಿನವೂ ನಮಗೆ ಹೊಸ ಹೊಸ ಸ್ನೇಹಿತರು ಸಿಕ್ತ ಇದ್ರು. ವಾವ್ ಏನ್ ಚೆನ್ನಾಗಿದ್ವು ಅಲ್ವ ಆ ದಿನಗಳು?

Tuesday, November 29, 2011

ಅಭಿಮಾನ ಶೂನ್ಯತೆ

ನಮ್ಮ ಜನ ಯಾವಾಗ ಸರಿ ಹೋಗ್ತಾರೋ ಅನಿಸಿಬಿಟ್ಟಿದೆ. ನಮ್ಮ ದೇಶವನ್ನು, ದೇಶದ ಜನರನ್ನು ಗಣನೆಗೆ ತಗೆದುಕೊಂಡರೆ, ನಮ್ಮನ್ನು ಅಭಿಮಾನ ಶೂನ್ಯತೆ ಯಲ್ಲಿ ಮೀರಿಸುವವರು ಪ್ರಪಂಚದಲ್ಲಿ ಎಲ್ಲಿಯೂ ಸಿಗರು. ಛೆ! ಏನಾಗಿದೆ ನಮಗೆ ನಮ್ಮ ಭಾಷೆ, ನಮ್ಮ ನೆಲ ಅನ್ನೋ ಚೂರು ಅಭಿಮಾನವೂ ಇಲ್ಲದೆ ಹೋಯಿತೆ? ಈ ದಿನಗಳಲ್ಲಿ ಪರಭಾಷೆಯಲ್ಲಿ ಮಾತನಾಡೋದೇ ದೊಡ್ಡಸ್ತಿಕೆಯ ಲಕ್ಷಣ. ಇದಕ್ಕೆ ಯಾರೂ ಹೊರತಾಗಿಲ್ಲ. ನಮ್ಮ ಕ್ರೀಡಾ/ಚಲನಚಿತ್ರ/ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಗಳಿಸಿದವರು ಅಪ್ಪಿ ತಪ್ಪಿಯೂ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲ. ಉದಾಹರಣೆಗೆ ನಮ್ಮ ಯಾವುದೇ ಚಿತ್ರ ತಾರೆಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲ. ಆದರೆ ಚಲನಚಿತ್ರಗಳನ್ನು ಮಾತ್ರ ಹಿಂದಿ/ಕನ್ನಡ ದಲ್ಲಿ ಮಾಡ್ತಾರೆ. ಎಲ್ಲೋ ಕೆಲವೊಬ್ಬರು ಇದಕ್ಕೆ ಹೊರತಾಗಿರಬಹುದು (ತಮಿಳು-ಮಲೆಯಾಳಂ ಜನ). ತಮ್ಮನ್ನು ಅನುಕರಿಸೋ ಸಾವಿರಾರು ಜನ ಇರ್ತಾರೆ ಅನ್ನೋ ಪರಿಜ್ಞಾನ ಇರೋಲ್ಲ ಅವರಿಗೆ.

ಇನ್ನು ನಮ್ಮ ಕನ್ನಡಿಗರ ಕತೆ ಹೇಳೋದೇ ಬೇಡ. ತಮ್ಮ ನಾಡು-ನುಡಿಯ ಬಗ್ಗೆ ತೀರ ಕಡಿಮೆ ಅಭಿಮಾನ ಇರುವವರ ಸ್ಪರ್ಧೆ ಮಾಡಿದರೆ ನಾವೇ ಮೊದಲು ಬರ್ತಿವಿ. ದೊಡ್ಡ ದೊಡ್ಡ ಜನಗಳನ್ನು ಬಿಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಷ್ಟೋ ಜನ ಹೀಗಿರ್ತರೆ. ಮೊನ್ನೆ ಏನಾಯಿತು ಅಂದರೆ ನನ್ನ ಒಬ್ಬ ಸ್ನೇಹಿತ ಪರಸ್ಥಳಕ್ಕೆ ಹೋಗಿದ್ದ. ವಾಪಾಸ್ ಬಂದಾಗ ಹೇಳಿದ ಅದ್ಯಾವುದೋ ತಮಿಳು ಹಾಡು ಅವನು ಹೋದ ಊರಲ್ಲಿ, ಅಷ್ಟೇ ಅಲ್ಲ ಇಡೀ ದೇಶದಲ್ಲೇ ಜನಪ್ರಿಯ ಆಗಿ ಹೋಗಿದೆ. ಅಂತರ್ಜಾಲದಲ್ಲಿ ಲಕ್ಷಾನುಗಟ್ಟಲೆ ಜನ ಇಷ್ಟ ಪಟ್ಟಿದಾರೆ ಅದೂ ಇದೂ ಏನೇನೋ ಹೇಳಿದ. ನಾ ಕೇಳಿದೆ ಅದ್ರಲ್ಲಿ ಅಂತದ್ದು ಏನಪ್ಪಾ ಇದೆ ಅದರಲ್ಲಿ? ಅವನು ಹೇಳಿದ, ಅದು ತಮಿಳು ಹಾಗು ಇಂಗ್ಲಿಷ್ ಮಿಶ್ರಣ ಮಾಡಿ ಬರೆದಿರೋ ಹಾಡು, ತುಂಬಾ ಚೆನ್ನಾಗಿದೆ, ತುಂಬಾ ಚೆನ್ನಾಗಿ ಬರೆದಿದಾನೆ, ಹಾಡಿದ್ದಾನೆ ಅಂದ. ನಾನು ಕುತೂಹಲಕ್ಕಾಗಿ ಕೇಳಿದಾಗ ಅದರೆಲ್ಲೇನೂ ಹೊಸದಿಲ್ಲ ಅನಿಸ್ತು. ನಮ್ಮ ಯೋಗರಾಜ ಭಟ್ಟರ ಪ್ರತೀ ಚಲನಚಿತ್ರದಲ್ಲೂ ಅಂತಹ ಒಂದೆರಡು ಹಾಡು ಇರ್ತವೆ. ಅಲ್ಲಾರಿ ನಮ್ಮವರು ಮಾಡಿದ್ರೆ ಕೇಳೋಲ್ಲ, ಅದೇ ಬೇರೆಯವರು ಮಾಡಿದ್ರೆ ಹೊಗಳುತೀವಲ್ಲಾ? ಇದು ನ್ಯಾಯನಾ?

ಹೀಗೆ ಬರಿತಾ ಹೋದರೆ ಇಡೀ ಜೀವನ ಸಾಲದು. ಹೋಗ್ಲಿ ಬಿಡಿ!!

Monday, November 7, 2011

'ಇ ಜ್ಞಾನ' -ವಿಜ್ಞಾನ ಸಂವಹನ ಪತ್ರಿಕೆ

'ಇ ಜ್ಞಾನ' -ವಿಜ್ಞಾನ ಸಂವಹನ ಪತ್ರಿಕೆ. ಓದಲು ಕ್ಲಿಕ್ಕಿಸಿ ಅಥವ ಜಾಲತಾಣದ ವಿಳಾಸವನ್ನು ನಕಲಿಸಿ ನಿಮ್ಮ ವೆಬ್ ಬ್ರೌಸೆರ್ ನ ವಿಳಾಸಕ್ಕೆ ಅಂಟಿಸಿ. ನಿಜಕ್ಕೂ ಒಳ್ಳೆಯ ಪ್ರಯತ್ನ.

http://issuu.com/srimysore/docs/vijnanasamvahana/22

Wednesday, September 21, 2011

ಜನಾ ರೆಡ್ಡಿ ಹಾಗೂ ಅವನ ಆಸ್ತಿ

ನಾವೆಲ್ಲರೂ ಅನಂತ ಪದ್ಮನಾಭನದೇ ಭಾರಿ ಆಸ್ತಿ ಅಂದುಕೊಂಡಿದ್ರೆ ಅದನ್ನೂ ಮೀರಿಸೋ ಹಾಗೆ ನಮ್ಮ ಜನಾರ್ಧನ ರೆಡ್ಡಿ ಮಾಡಿಟ್ಟಿದ್ದರಲ್ಲಾ? ಅಲ್ಲ ಒಬ್ಬ ಮನುಷ್ಯ ಇಷ್ಟೊಂದು ಆಸ್ತಿ ಮಾಡಬಹುದಾ? ಹೆಸರಿಗೆ ತಕ್ಕ ಹಾಗೆ ದರ್ಬಾರ್ ಮಾಡ್ತಾ ಇದ್ದ ಅವನನ್ನ ಸಿ ಬಿ ಐ ನವರು ಬೇಟೆಯಾಡಿ ಜೈಲಿಗೆ ಅಟ್ಟಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ನನಗೊಂದು ಯೋಚನೆ ಬಂದಿದೆ. ಹ್ಯಾಗಿದ್ದರೂ ಅವನಿಗೆ ಸಾವಿರಾರು ಕೋಟಿ ಆಸ್ತಿ ಇದೆ. ನಾವ್ಯಾಕೆ, ಅಂದ್ರೆ ನಮ್ಮ NITK ಸಂಶೋಧನಾ ವಿದ್ಯಾರ್ಥಿಗಳೆಲ್ಲರೂ ಹೋಗಿ ಯಾಕೆ ಒಂದು ಹತ್ತು ಕೋಟಿ ಬಂಡವಾಳ ಹಾಕಿ ಒಂದು ಒಳ್ಳೆ ರಿಸರ್ಚ್ ಸೆಂಟರ್ ತೆಗಿಬಾರದು ನಮ್ಮ ವಿದ್ಯಾಲಯದಲ್ಲಿ ಅನ್ನೋ ಐಡಿಯಾ ಕೊಡಬಹುದಲ್ಲವ? ಬೇಕಾದರೆ ಎಲ್ಲ ಪೇಪರ್ಗಳಲ್ಲೂ ಅವನ ಹೆಸರನ್ನೂ ಹಾಕೋಣ. ಅವನಿಗೆ ಹತ್ತು ಕೋಟಿ ಅದ್ಯಾವ ಲೆಖ್ಖ? ಬೇರೆಯವರು ಒಪ್ತಾರೋ ಬಿಡ್ತಾರೋ ನಾನು ಮಾತ್ರ ಹೋಗಿ ಕೇಳೋಣ ಅಂತ ಇದೀನಿ.

Saturday, July 30, 2011

ಲೋಕದ ಡೊಂಕ ನೀವೇಕೆ ತಿದ್ದುವಿರಿ

ಸ್ನೇಹಿತರೇ,

ಇವತ್ತು ತಾನೆ ವಿಶ್ವದ ಹಿರಿಯಣ್ಣ ಅಂತ ಅನ್ನಿಸಿಕೊಳ್ಳೋದಿಕ್ಕೇ ಯಾವಾಗಲೂ ಪ್ರಯತ್ನ ಪಡ್ತಾನೆ ಇರೋ ಅಮೆರಿಕದಿಂದ ಒಂದು ಹೇಳಿಕೆ ಹೊರಬಿದ್ದಿದೆ. ಹೇಳಿಕೆ ಕೊಟ್ಟವರು ಇಡೀ ವಿಶ್ವವೇ ಹೆಮ್ಮೆ ಪಟ್ಟಿದ್ದ ಒಬಾಮ!!! ಆಗಿದ್ದು ಇಷ್ಟೇ, ತೈಲ ಬೆಲೆ ಏರಿಕೆಗೆ ಈಗ ಮುಂದುವರೆಯುತ್ತಿರುವ ಚೀನಾ ಹಾಗೂ ಭಾರತ ಕಾರಣವಂತೆ. ಹಿಂದೊಮ್ಮೆ ಯಾರೋ ಇನ್ನೊಬ್ಬ ಮಹಾಶಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಆಹಾರ ಸಮಸ್ಯೆಗೆ ಈ ಎರಡು ದೇಶಗಳೇ ಕಾರಣ ಎಂದಿದ್ದ. ಈ ಹೇಳಿಕೆಯೂ ಅದರ ಇನ್ನೊಂದು ಮುಖ ಅಷ್ಟೇ. ಅಲ್ಲಾ ಆ ಅಮೆರಿಕದವರೂ ಮನೆಗೆ ಮೂರು ಮೂರು ಕಾರುಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಹೆಚ್ಚು ಇಂದನ ಕಬಳಿಸುವ ಎಸ್.ಯು.ವಿ. (ಸ್ಪೋರ್ಟ್ ಯುಟಿಲಿಟಿ ವೆಹಿಕೆಲ್) ಗಳೇ ಬೇಕು. ನಮ್ಮ ಜನ ಎಲ್ಲಿ ಪೆಟ್ರೋಲ್ ಖರ್ಚಾಗಿ ಹೋಗುತ್ತೋ ಅಂತ ಯೋಚಿಸಿ ಮಾಡಿ, ಅಳೆದು ಸುರಿದು ಕೊನೆಗೆ ಬೇರೆ ದಾರಿ ಇಲ್ಲವೆಂದು ತೋರಿದಾಗ ಉಪಯೋಗಿಸುತ್ತಾರೆ. ಮಿತವ್ಯಯದ ಮಂತ್ರ ವನ್ನು ಜಗತ್ತಿಗೆ ಹೇಳಿಕೊಟ್ಟವರೆ ನಾವು. ನಮ್ಮ ಜನ ಅಲ್ಪ ಸ್ವಲ್ಪ ಮಿತವ್ಯಯ ಮಾಡದೆ ಇದ್ದಿದ್ದರೆ, ಮೊನ್ನೆ ಆರ್ಥಿಕ ಹಿಂಜರಿತ ಉಂಟಾದಾಗ ಅಮೆರಿಕ ನಡುಗಿ ಹೋಯ್ತು. ಅದರ ರಾಕ್ಷಸ ದಂತಹ ದೊಡ್ಡ ದೊಡ್ಡ ಸಂಸ್ಥೆ ಗಳೇ ನಲುಗಿ ಹೋದವು. ನಮ್ಮಲ್ಲಿ ಆ ಥರ ಏನೂ ಆಗಲಿಲ್ಲ.

ಈ ಅಮೇರಿಕದವರದ್ದು ಅತಿ ಆಯಿತು. ಬರಿ ಸ್ವಾರ್ಥಿಗಳು. ಬೇರೆಯವರಿಗೆ ಹೇಳುವ ಮೊದಲು ತಮ್ಮದನ್ನು ನೋಡಿಕೊಳ್ಳಲಿ. ಇಂತವರನ್ನು ನೋಡಿಯೇ ನಮ್ಮ ಬಸವಣ್ಣ ೧೨ನೆ ಶತಮಾನದಲ್ಲೇ ಹೇಳಿದರು.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ಸರಿಯಾಗಿ ಹೇಳಿದರಲ್ಲವಾ?

Monday, May 2, 2011

ಅಮೇರಿಕಾ ಹಾಗೂ ಭಾರತ

ನಿನ್ನೆ ಅಮೇರಿಕಾ ಒಂದು ದೊಡ್ಡದಾದ ನಿಟ್ಟುಸಿರು ಬಿಟ್ಟಿತು. ಅದೇ ಸಾಕಿ ಬೆಳೆಸಿದ ಒಸಾಮಾ ಮುಂದೊಂದು ದಿನ ತನಗೇ ತಿರುಗುಬಾಣವಾಗಿ ಬಹು ದೊಡ್ಡ ನಷ್ಟ ಮಾಡುತ್ತಾನೆ ಎಂದು ಕನಸಿನಲ್ಲಿಯೂ ಕೂಡ ಏಣಿಸಿರಲಿಲ್ಲ. ಅದರೂ ಆ ದೇಶ ತೋರಿದ ದಿಟ್ಟ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು . ಹತ್ತು ವರ್ಷದಲ್ಲಿ ಅದು ಸರ್ವ ರೀತಿಯಿಂದಲೂ ತಯಾರಿ ಮಾಡಿ ಕೊನೆಗೂ ಅವನನ್ನು ಬಲಿ ತೆಗೆದುಕೊಂಡೆಬಿಡ್ತು.

ಒಸಾಮಾ ಅಮೇರಿಕಾ ದಾಳಿ ಮಾಡಿದ ಒಂದೇ ತಿಂಗಳಲ್ಲಿ ನಮ್ಮ ಪ್ರಜಾಪ್ರಭುತ್ವ ದ ಸಂಕೇತವಾಗಿರುವ ಸಂಸತ್ ಭವನದ ಮೇಲೆ ದಾಳಿ ನೆಡಿಯಿತು. ಅದೃಷ್ಟವಶಾತ್ ನಮ್ಮ ಧೀರ ರಕ್ಷಣಾ ಸಿಬ್ಬಂದಿಗಳು ತಮ್ಮ ಜೀವವನ್ನೇ ಪಣವಾಗಿಟ್ಟು ಹೆಚ್ಚಿನ ನಷ್ಟವಾಗುವುದನ್ನು ತಪ್ಪಿಸಿದರು. ಅದಾದ ಮೇಲೆ ಆ ದಾಳಿಯ ರೂವಾರಿ ಗಳನ್ನೂ ಬಂದಿಸಿದಾಗ ನಮ್ಮ ದೇಶವಾಸಿಗಳಿಗೆ ಏನೋ ಸಮಾದಾನ ದೊರಕಿತ್ತು. ಆದರೆ ನಮ್ಮ ಕೀಳು ಮಟ್ಟದ ರಾಜಕೀಯ ಎಲ್ಲಿಗೆ ಬಂದು ಮುಟ್ಟಿತೆಂದರೆ, ಅವನಿಗೆ ಕೊಟ್ಟ ಶಿಕ್ಷೆಯನ್ನೂ ಮುಂದೆ ಮುಂದೆ ಹಾಕುತ್ತಲೇ ಬಂದರು. ಇನ್ನೂ ಆ ಪಾಪಿ ಜೀವಂತವಾಗಿದ್ದನೆಂದರೆ ಇದೊಂದು ದುರಂತವಲ್ಲದೆ ಬೇರೇನು? ಥೂ!!!!!

ಅಮೇರಿಕಾ ಶತ್ರುವಿನ ದೇಶಕ್ಕೆ ನುಗ್ಗಿ ಅವನನ್ನು ಸದೆ ಬಡಿಯಿತು ಆದರೆ ನಾವು ಶತ್ರುವನ್ನು ಸೆರೆ ಹಿಡಿದೂ ಅವನನ್ನು ಶಿಕ್ಷಿಸದೆ ಜತನದಿಂದ ಕಾಪಾಡುತ್ತೇವೆ ಅಂದ್ರೆ ಏನು? ಛೆ!! ಎಂತಹ ವೀರ, ಶೂರರು ಆಳಿದ ನಮ್ಮ ನಾಡಿಗೆ ಈ ಗತಿ ಬಂತಲ್ಲ? ಅಯ್ಯೋ! ದೇವರೇ ನಮಗೆ ನೀನೆ ಗತಿ!!