Tuesday, November 4, 2014

ಬಹುದಿನಗಳ ನಂತರ!

ಛೆ!! ಭರ್ತಿ ಒಂದೂವರೆ ವರ್ಷವೇ ಕಳೆದು ಹೋಯಿತು ನಾನು ನನ್ನ ಮೂಗಿನ ನೇರಕ್ಕೆ ಬರೆದು, ಕೆಲವೊಂದು ಸಲ ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡೋದು ಒಳ್ಳೆದೇ. ಅಷ್ಟಕ್ಕೂ ಈ ರೀತಿ ಬರೆಯೋ ಹುಚ್ಚು ನನಗೆ ಅಂಟಿಕೊಂಡಿದ್ದರೂ ಹ್ಯಾಗೆ?  ಯಾಕೆಂದರೆ ನನ್ನ ಮೂಗಿನ ನೇರಕ್ಕೆ ವಿಶ್ಲೇಷಿಸಿದ/ಬರ್ಕೊಂಡ ವಿಚಾರಗಳು ಎಲ್ಲರಿಗೂ ಸರಿ ಬರುತ್ತೆ ಅನ್ನೋದು ಹೇಳೋಕೆ ಆಗೋಲ್ಲ. ಆದರೂ ಇದೊಂದ್ ತರ ಹುಚ್ಚು ನನಗೆ. ಕೆಲವೊಂದು ಹುಚ್ಚುಗಳು ಒಳ್ಳೆಯವೇ. ನಾನು ಅವನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುವುದರ ಮೇಲೆ ನಿರ್ಧಾರಿತವಾಗಿರುತ್ತೆ. ಏನಾದರೂ ಬರೆದೇ ಬಿಡೋಣ ಇವತ್ತು ಅಂತ ಕೂತುಬಿಟ್ಟಿದ್ದೇನೆ ಆದರೆ ಏನ್ ಬರೀಲಿ ಅಂತಾನೆ ಗೊತ್ತಾಗ್ತಾ ಇಲ್ಲ. ನಾನು ಸುಮ್ನೆ ಕಾಲಹರಣ ಮಾಡಿದ್ರೆ ನನ್ನ ಸಮಯವಲ್ಲದೆ ಇದನ್ನು ಓದುವುವರ ಕಾಲವೂ ಹಾಳು.

ಕೆಲವೊಂದು ಸಲ ನಾವು ಎಷ್ಟು ಸಮಯವಿದ್ದರೂ ಸಹ ನಾನು ಬಿಡುವಿಲ್ಲದ ಮನುಷ್ಯ ಎಂದು ತೋರಿಸುಕೊಳ್ಳುವುದರಲ್ಲೇ ನಮಗೆ ಏನೋ ಒಂದು ಅವ್ಯಕ್ತ ಸುಖ. ಯಾರೋ ಒಬ್ಬ ಮಹಾನುಭಾವ ಹೇಳಿದ ನೆನಪು, ಯಾರು ತಮ್ಮ ಎಲ್ಲ ಕೆಲಸಗಳಿಗೂ ಬಿಡುವು ಮಾಡಿಕೊಳ್ಳುತ್ತಾರೋ ಅವರೇ ನಿಜವಾಗಿಯೂ ಬಿಡುವು ಇಲ್ಲದೆ ಇರುವ ಮನುಷ್ಯ. ಕೆಲವೊಂದು ಸಲ ನಮಗೆ ಇಷ್ಟವಾದ ಕೆಲಸವನ್ನು ಏನಾದರೂ ಮಾಡಿ ನೆರವೇರಿಸಿಯೇ ತೀರುತ್ತೇವೆ. ನಮಗೆ ಎಷ್ಟೇ ಹೊಟ್ಟೆ ತುಂಬಿರಬಹುದು ಆದರೆ ನಮ್ಮಿಷ್ಟದ ತಿಂಡಿಯನ್ನು ತಂದಾಗ ಅದನ್ನು ತಿನ್ನದೇ ಇರಲು ಸಾಧ್ಯವೇ, ನಮ್ಮ ಹೊಟ್ಟೆ ಕೇಳದೆ ಇರಬಹುದು ಆದರೆ, ನಮ್ಮ ನಾಲಗೆ ಹಾಗೂ ಕಳ್ಳ ಮನಸ್ಸು ಹ್ಯಾಗಾದರೂ ಮಾಡಿ ಅದನ್ನು ಕಬಳಿಸುವ ಹೊಂಚು ಹಾಕುತ್ತಿರುತ್ತವೆ.

ಈಗ ನಮ್ಮ ದೇಶದಲ್ಲಿ ಇಲ್ಲದೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆಯೇ ಮಾತು. ಒಬ್ಬ ಮಹನೀಯ ಹೇಳಿದ್ದಾರೆ, "be the change that you want see". ನಮ್ಮ ದೇಶ ಸ್ವಚ್ಛವಾಗಿರಬೇಕು ಅಂದರೆ ನಾವು ಮೊದಲು ಸ್ವಚ್ಚವಾಗಿದ್ರೆ ಒಳ್ಳೆದಲ್ಲವೇ. ಕೆಲವೊಬ್ಬ ಪ್ರಗತಿಪರ ಬುದ್ದಿಜೀವಿಗಳ ಪ್ರಕಾರ ಮನಸ್ಸು ಸ್ವಚ್ಚವಾಗಿದ್ರೆ ಸಾಕಂತೆ, ಅದಕ್ಕೆ ಅನಿಸುತ್ತೆ ಈ ಬುದ್ದಿ ಜೀವಿಗಳು ಯಾವಾಗಲೂ ಮಾಸಲಾದ, ಹಳೆಯ, ಕೊಳೆಯಾದ ಬಟ್ಟೆಗಳನ್ನು ಬಳಸುತ್ತಾರೆ. ನೀವು ಏನೇ ಹೇಳಿ, ನಾವು ಬಿಸ್ಕತ್ ತಿನ್ನೋಕೂ ಮೊದಲು ಅದರ ಪ್ಲಾಸ್ಟಿಕ್ ಕವಚ ನೋಡ್ತೀವಿ ತಾನೇ. ಪ್ಲಾಸ್ಟಿಕ್ ಅಲ್ವ ಏನೂ ಆಗೋಲ್ಲ ಅಂತ ಚರಂಡಿಯಲ್ಲಿ ಬಿದ್ದಿರೋ ಬಿಸ್ಕತ್ ಪೊಟ್ಟಣ ಎತ್ತಿಕೊಂಡು ತಿನ್ನೋಕೆ ಆಗುತ್ತಾ? ನಮ್ಮ ಮನಸ್ಸು ಹ್ಯಾಗಿದೆ ಇನ್ನೊಬ್ಬರಿಗೆ ಅನಿಸಬೇಕು ಅಂದ್ರೆ ಮೊದಲು ನಮ್ಮ ಮನಸಿರೋ ಈ ದೇಹ, ಅದು ವಾಸ ಮಾಡ್ತಾ ಇರೋ ಜಾಗ ಚೆನ್ನಾಗಿರಬೇಕಲ್ವ? ಏನೇ ಆಗಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವ ನಮ್ಮ ಮೋದಿಗೆ ಒಂದು ದೊಡ್ಡ ಸಲಾಂ! ಅಲ್ಲ ಆ ಮನುಷ್ಯನಿಗೆ ಈ ಥರ ಯೋಚನೆಗಳು ಹ್ಯಾಗೆ ಬರ್ತವೆ ಅಂತ. ನಾವು ಶುಚಿಯಾಗಿ ಇರಬೇಕು ಅಂತ ಎಲ್ಲರಿಗೂ ಗೊತ್ತು, ಆದರೂ ಅದನ್ನೇ ಒಂದು ಕಾರ್ಯಕ್ರಮ ಅಂತ ಜಾರಿ ಮಾಡಿ, ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸೋ ಕೆಲಸ ಮಾಡ್ತಾ ಇದರಲ್ಲ ಅವ್ರು ಅದಕ್ಕೆ ಮೆಚ್ಚಬೇಕು. ಹಿಂದೊಮ್ಮೆ ನಮ್ಮ ದೇಶದಲ್ಲಿ ಬರಗಾಲ ಪರಿಸ್ಥಿತಿಯೋ, ಯುದ್ದವೋ ಇದ್ದಾಗ ಅಂದಿನ ಪ್ರಧಾನ ಮಂತ್ರಿ ಇದೇ ರೀತಿ ದೇಶವಾಸಿಗಳೇ, ನಮ್ ಹತ್ರ ದವಸ ಧಾನ್ಯ ಕಮ್ಮಿ ಇದೆ ಎಲ್ಲರೂ ಒಂದು ಹೊತ್ತು ಉಪವಾಸ ಇರೋಣ ಎಂದು ಕರೆ ಕೊಟ್ಟಾಗ, ಎಲ್ಲರೂ ಅದೇ ರೀತಿ ಮಾಡಿದ್ರು ಅಂತ ಈಗಿನ ಕಾಲದ ಹುಡುಗರಿಗೆ (ನನ್ನನೂ ಸೇರಿಸಿ) ಹೇಳಿದರೆ ನಕ್ಕು ಸುಮ್ಮನಾಗ್ತಾರಷ್ಟೇ. ರಾಜಕಾರಣಿಗಳ ಬಗ್ಗೆ ಒಂದು ಸಿನಿಕತೆ ಇರುವ ಈ ಕಾಲದಲ್ಲಿ ಆ ತರಹದ ದೃಷ್ಟಾಂತಗಳು ಬರಿ ಕಲ್ಪನೆ ಎಂದು ಭಾಸವಾಗಿರಲೂಬಹುದು. ಆದರೆ ನಮ್ಮ ಜನ ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಕೊಡ್ತಾರೆ ಅನ್ನೋದಕ್ಕೆ ನಿದರ್ಶನವೇ ನಮ್ಮ ಪ್ರಧಾನಿ ಮೋದಿ.

ಹೀಗೆ ಬರಿತಾ ಹೋದರೆ ಬರಿತಾನೆ ಇರಬಹುದು. ಆದರೂ, ಬರವಣಿಗೆಗೆ ಒಂದು ಧ್ಯೇಯ ಇದ್ದರಷ್ಟೇ ಅದಕ್ಕೊಂದು ಭೂಷಣ.

ಎಲ್ಲರಿಗೂ ಒಳ್ಳೆದಾಗಲಿ, ಮತ್ತೆ ಸಿಗೋಣ, ಮಾತಾಡಲಿಕ್ಕೆ, ಸಂವಾದಿಸಲ್ಲಿಕ್ಕೆ ಸಿಕ್ಕಾಪಟ್ಟೆ ವಿಷಯ ಇವೆ!!

Sunday, May 19, 2013

ದುರಾದೃಷ್ಟದ ಪರಮಾವಧಿ

ನಮ್ಮ ರಾಜ್ಯದ ರಾಜಕಾರಣಿಗಳಿಗೆ, ಜನರಿಗೆ ತಾಕತ್ತು ಅನ್ನೋದೇ ಇಲ್ವಾ? ಈಗ ಯಾಕೆ ಈ ಥರ ಯೋಚನೆ ಬಂತಂದ್ರೆ, ನಮ್ಮ ರಾಜ್ಯಕ್ಕೆ ರೈಲು ಮಾರ್ಗಗಳಲ್ಲಿ, ಹಾಗೂ ರೈಲಿಗೆ ಸಂಬಂದಿಸಿದ ವಿಚಾರಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ನೆನೆಸಿಕೊಂಡು ಬೇಸರ ಆಯಿತು. ಬ್ರಿಟಿಷರ ಕಾಲದಲ್ಲಿ ಆಗಿದ್ದ ಒಂದೇ ಮಾರ್ಗವನ್ನು ಇಟ್ಟುಕೊಂಡು ಜೀವನ ಸಾಗಿಸುತ್ತ ಇದ್ದೀವಲ್ಲ ಇನ್ನೂ. ಛೇ ...

ಮಂಗಳೂರು ಮತ್ತು ಬೆಂಗಳೂರಿನ ನಡುವೆ ಸಂಚಾರ ಮತ್ತೆ ಪ್ರಾರಂಭವಾಗಿಲಿಕ್ಕೆ ದೊಡ್ಡ ಹೋರಾಟವನ್ನೇ ನಡೆಸಬೇಕಾಗಿ ಬಂತು. ಆದರೂ ನಮಗೆ ಸಿಕ್ಕಿದ್ದು ಬಹಳ ಜನಕ್ಕೆ ಉಪಯೋಗವಾಗದ ಎರಡು ರೈಲುಗಳು. ನಮ್ಮ ದುರಾದೃಷ್ಟದ ಪರಮಾವದಿಯನ್ನೇ ನೋಡುತ್ತಿದ್ದೇವೆ, ಸಿಕ್ಕ ಎರಡು ರೈಲುಗಳ ಪೈಕಿ ಒಂದು, ಬೆಂಗಳೂರು ತಲುಪಲಿಕ್ಕೆ ಬರೋಬ್ಬರಿ ೧೨ ಗಂಟೆಗಳನ್ನೇ ತಗೆದುಕೊಳ್ಳುತ್ತದೆ. ಹತ್ತಿರದ ಮಾರ್ಗವಾದ ಹಾಸನ-ತುಮಕೂರು-ಬೆಂಗಳೂರು ಬಿಟ್ಟು, ಮೈಸೂರು ಮಾರ್ಗವಾಗಿ ಚಲಿಸುತ್ತದೆ. ಸರ್ಕಾರದವರಿಗೆ ಮೈಸೂರಿಗೂ ಒಂದು ರೈಲನ್ನು ಓದಿಸಬೇಕಿಂದರೆ. ಅದನ್ನು ಲಿಂಕ್ ರೈಲಿನ ತರಹ ಮಾಡಬಹುದಿತ್ತು. ಈಗ ಆಗಿರೋದು ಹೇಗಾಗಿದೆ ಅಂದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ. ಇದಕ್ಕೆ ಯಾವ ರಾಜಕಾರಣಿಗಳು ತೆಲೆನೇ ಕೆಡಿಸಿಕೊಂಡ ಹಾಗೆ ಕಾಣಿಸ್ತ ಇಲ್ಲ.

ಆಮೇಲೆ ಇನ್ನೊಂದು ಮಾರ್ಗವೆಂದರೆ, ಬೆಂಗಳೂರು-ದಾವಣಗೆರೆ. ಇಲ್ಲಿಯೂ  ಕೂಡ ರೈಲು ಬಳಸಿಕೊಂಡು ಸಾಗುತ್ತಿದೆ. ಹತ್ತಿರದ ಚಿತ್ರದುರ್ಗ ಮಾರ್ಗವನ್ನು ಬಿಟ್ಟು ದೂರದ ಕಡೂರು ಮಾರ್ಗದಲ್ಲಿ ಚಲಿಸುತ್ತಿದೆ. ಚಿತ್ರದುರ್ಗ ಮಾರ್ಗವನ್ನು ಮಾಡುವುದರಿಂದ ಕನಿಷ್ಠ ೬೦ ಕಿ. ಮಿ. ಉಳಿತಾಯವಾಗುವುದರ ಜೊತೆಗೆ ಚಿತ್ರದುರ್ಗಕ್ಕೆ ಹತ್ತಿರವಾದ ಹಾಗೂ ನೇರವಾದ ಮಾರ್ಗವನ್ನು ರಚಿಸಿದ೦ತೆ ಆಗುವುದು. ಮೇಲಾಗಿ ಮುಂಬೈ-ಬೆಂಗಳೂರಿನ ದೂರವೂ ಕಡಿಮೆಯಾಗುವುದು. ಈ ಮಾರ್ಗದ ವಿಚಾರವನ್ನು ನಾನು ೭-೮ ತರಗತಿಯ ವಿದ್ಯಾರ್ಥಿಯಾಗಿರುವಗಿನಿಂದ ಕೇಳುತ್ತಿದ್ದೇನೆ. ಇನ್ನೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಪ್ರತಿ ಬಾರಿಯೂ ಬಜೆಟ್ ಮಂಡಿಸಿದಾಗ ಒಂದೆರಡು ಕೋಟಿಗಳನ್ನು ಕೊಟ್ಟು ಸುಮ್ಮನಿರಿಸಲಾಗುತ್ತೆ. ಕೊಟ್ಟೂರು-ಹರಿಹರದ ಮಾರ್ಗ ಮುಗಿಯಲು ಇನ್ನೆಷ್ಟು ಸಮಯ ಬೇಕೋ? ಕಡೂರು-ಚಿಕ್ಕಮಗಳೂರಿನ ಕಥೆಯೂ ಇದೇ, ಕೊಡಗಿಗೆ ಇನ್ನೂ ಒಂದು ಮಾರ್ಗವನ್ನು ಕಲ್ಪಿಸಲಾಗಲಿಲ್ಲ. ಏನೋ ಬ್ರಿಟಿಷರು ಒಂದೆರಡು ಮಾರ್ಗವನ್ನು ಮಾಡಿಟ್ಟು ಹೋದರು, ಇನ್ನೂ ಅದನ್ನೇ ಇಟ್ಟುಕೊಂಡಿದ್ದೇವೆ. ನಮ್ಮ ರಾಜ್ಯದಲ್ಲಿ ಹಾದು-ಹೋಗುವ ಯಾವುದೇ ಮಾರ್ಗವನ್ನು ವಿದ್ಯುದೀಕರಣವನ್ನು ಇನ್ನೂ ಮಾಡಿಲ್ಲ. ಹಾಗೆ ನೋಡಿದರೆ ನಮ್ಮ ರಾಜ್ಯವು ಪ್ರತಿ ರೈಲು ಯೋಜನೆಯಲ್ಲಿ ಪಾಲುದಾರಿಕೆ ವಹಿಸಿಕೊ೦ಡಿದೆ (ನನಗೆ ತಿಳಿದಮಟ್ಟಿಗೆ ). ನಾವಿನ್ನೂ ರೈಲು ಸಂಪರ್ಕದ ವಿಚಾರಕ್ಕೆ ಬಂದಾಗ ಕನಿಷ್ಠ ೧೫-೨೦ ವರ್ಷ ಹಿಂದೆ ಇದ್ದೇವೆ ಅಂದರೆ ಅತಿಶಯೋಕ್ತಿಯಾಗಲಾರದು.

ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳ ವೀರ-ಶೂರರು, ಜನಾನುರಗಿಗಳೂ ಆಗಿದ್ದ ರಾಜರುಗಳನ್ನು ಕಂಡ ಈ ನಾಡಿಗೆ ಅದರ ಒಳಿತಿಗಾಗಿ ಹೋರಾಡುವ ಒಬ್ಬನೇ ಒಬ್ಬ ರಾಜಕಾರಣಿ ಸಿಗದಿರುವುದು ನಮ್ಮಗಳ ದುರಾದೃಷ್ಟ. ಆಣೆಕಟ್ಟು ಕಟ್ಟಲಿಕ್ಕೆ ಅರಮನೆಯ ಚಿನ್ನಾಭರಣಗಳನ್ನು ಒತ್ತೆ ಇತ್ತ ಮೈಸೂರು ಒಡೆಯರಂತಹ ಆಳುವುವರನ್ನು ಪಡೆಯುವುದು ನಮ್ಮ ಹಣೆಯಲ್ಲಿ ಬರೆದಿಲ್ಲವೇನೋ.

ಇದೆ ಅಲ್ಲವೇ ದುರಾದೃಷ್ಟದ ಪರಮಾವಧಿ !!

ನಮ್ಮ ಮೋದಿ

ಮೊನ್ನೆ ನಮ್ಮ ಮೋದಿಯವರು ಬೆಂಗಳೂರಿಗೆ ಭೇಟಿ ಕೊಟ್ಟಾಗ ಅವರ ಭಾಷಣವನ್ನು ಕಿವಿಯಾರೆ ಕೇಳಿ, ಅವರನ್ನು ಕಣ್ತು೦ಬಾ ನೋಡಲು ಹೋಗಿದ್ದೆ. ಮಾರನೆಯ ದಿನ ಆ ಕಾರ್ಯಕ್ರಮದ ಬಗ್ಗೆ ಅವರ ಮಧ್ಯಮ ಮಿತ್ರರು ಏನು ಬರೆದಿರಬಹುದೆಂಬ ಕುತೂಹಲ ಕ್ಕಾಗಿ ದಿನ ಪತ್ರಿಕೆ ಗಳನ್ನೂ ತಿರುವಿ ಹಾಕಿದಾಗ ಬೇಸರವಾಯಿತು. ಈ ವರದಿಗಾರರು ಲೋಪಗಳನ್ನು ಹುಡುಕುವುದರಲ್ಲೇ ತೊಡಗಿದ್ದು ಕಂಡು ಬಂತು. ನನ್ನಲ್ಲಿ ಉದ್ಭವವಾದ ಕೆಲ ಪ್ರಶ್ನೆಗಳು ಇಂತಿವೆ

೧. ಮೋದಿ ತಮ್ಮ ಭಾಷಣದ ಉದ್ದಕೂ ಬರಿ ಕಾಂಗ್ರೆಸ್ ನ್ನು ಗುರಿಯಾಗಿಸಿಕೊಡಿದ್ದರ ಬಗ್ಗೆ ಆಕ್ಷೇಪ ಎತ್ತಲಾಗಿತ್ತು. ಅಲ್ಲಾರಿ, ಅವ್ರೆ ಚುನಾವಣೆಗೂ ಮುಂಚೆಯೇ ಕಾಂಗ್ರೆಸ್ ಬಹುಮತ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಮೊಮ್ಮುತ್ತದೆ ಅಂತ ಹೇಳಿದ ಮೇಲೆ, ಬುದ್ಧಿವಂತರಾದವರು (ತಮ್ಮ ಎದುರಾಳಿ ಯಾರೆಂದು ತಿಳಿದಮೇಲೂ) ಚಳ್ಳೆ-ಪಿಳ್ಳೆ ಗಳ ಬಗ್ಗೆ ಮಾತಾಡುತ್ತರಾ?

೨. ಅವರು ತಮ್ಮ ಭಾಷಣ ದಲ್ಲಿ ಯಡ್ಡಿ ಯ ಬಗ್ಗೆ ಮಾತಾಡಲಿಲ್ಲ ಎಂದೂ ಕೆಲವೊಂದು ಪತ್ರಿಕೆ ಗಳು ಬರೆದಿದ್ದವು. ಯಡ್ಡಿಯ ಬಗ್ಗೆ ಪ್ರಸ್ತಾಪ ಮಾಡಲಿಕ್ಕೆ ಅವನೇನು ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿಯಗಿದ್ದ ಪಟೇಲ್ ರೇ?, ದೇಶ ಕಂಡ ಸರಳ ಪ್ರಧಾನಿ ಶಾಸ್ತ್ರೀಜೀ ನೇ? ಅಥವಾ ವಿಧಾನಸೌದ ಕಟ್ಟಿಸಿದ ಕೆಂಗಲ್ ಹನುಮಂತರಾಯರೇ ಇಲ್ಲ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ನಿಜಲಿಂಗಪ್ಪನವರೇ?. ಮರಿ ಪುಡಾರಿ ಗಳ ಬಗ್ಗೆ ಮಾತನಾಡದಿದ್ದರೆ ಯಾರಿಗೂ ನಷ್ಟವಿಲ್ಲ. ಏನಾದರೂ ನಷ್ಟವಾಗಿದ್ದರೆ ಅದು ಪತ್ರಿಕೆಯವರಿಗೇ ಇರಬೇಕು.

೩. ಯಾವುದೋ ಒಂದು ಪತ್ರಿಕೆ ಯಲ್ಲಿ ಬಂದಿತ್ತು, ಭಾಷಣ ಮುಗಿದ ಮೇಲೆ ಮೋದಿಗೆ ವಾಪಸ್ ಹೊರಡಲು ಜಾಗ ಮಾಡಿ ಕೊಡಲು ಜನತೆ ಯನ್ನು ಅರ್ದ ಗಂಟೆಗೂ ಹೆಚ್ಚು ಹೊತ್ತು ಕ್ರೀಡಾಂಗಣದಲ್ಲೇ ಕಾಯಿಸಲಾಯಿತು ಎಂದು. ಇದೊಂದು ಹಸಿ ಸುಳ್ಳು, ನಾನೇ ಅಲ್ಲಿ ಇದ್ದೇನಲ್ಲ, ಬರಿ ಐದು ನಿಮಿಷದಲ್ಲಿ ಮೋದಿಜೀ ಅಲ್ಲಿಂದ ನಿರ್ಗಮಿಸಿದರು. ಮತ್ತೆ ಜನ ಒಬ್ಬಬ್ಬರಾಗಿ ತಮ್ಮ-ತಮ್ಮ ಗಮ್ಯವನ್ನು ಸೇರಲು ಹೊರಟರು.

ಇವು ಕೆಲವು ಉದಾಹರಣೆಗಳಷ್ಟೇ. ಈ ಮಾಧ್ಯಮದವರಿಗೆ ಮೋದಿ ಯನ್ನು ತೆಗಳುವುದೇ ಕೆಲಸವಾಗಿಬಿಟ್ಟಿದೆ.


Thursday, August 30, 2012

Nandanavana

ಇಂದು ಅವನನ್ನು ನೆನೆಸಿಕೊಂಡೆ, ಅವನು ಹಾಗೂ ನಾನು ಜೊತೆಯಲ್ಲೇ ಇದ್ದೆವು. ಆದರೆ, ಕೆಲವೊಂದು ಕಾರಣಗಳಿಂದ ಅವನು ನನ್ನಿಂದ ದೂರವಾದ. ಅವನು ತನ್ನ ಡಿಗ್ರಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಹೋಗಬಾರದಿತ್ತು. ಅವನಿಗೇನು ಕಷ್ಟವಿತ್ತೋ ನಾನು ಬಲ್ಲವನಲ್ಲವಾದ್ರೂ ಅವ್ನು ಇನ್ನಷ್ಟು ತಾಳ್ಮೆ ವಹಿಸಿದ್ದರೆ ಒಳ್ಳೇದಿತ್ತು. ಈಗ ಅವನು ಇಲ್ಲಿಗಿಂತ ಚೆನ್ನಾಗೆ ಇರಬಹುದು. ಆದರೂ ಅವ್ನು ಉಗುರಲ್ಲಿ ಹೋಗೋ ಹುಲ್ಲು ಕಡ್ಡಿಗೆ ಕೊಡಲಿ ತಗೊಂಡ. ಅವನು ಇಂತ ತೀರ್ಮಾನಕ್ಕೆ ಬರೋ ಹಾಗೆ ಮಾಡಿದ ವಿಷಯವೇನಾದರೂ ಇರಬಹುದು? ನನ್ನ ಬಹು ಕಾಲದ ಸ್ನೇಹಕ್ಕೆ ಬೆಲೆ ಕೊಟ್ಟಿದ್ದಾರೆ ಅವನು ಹೋಗುವ ಮೊದಲು ನನಗೆ ಒಂದು ಮಾತನ್ನು ಹೇಳುತಿದ್ದ. ಆದರೆ ನನ್ನಲ್ಲಿ ಅವನಿಗೆ ನಂಬಿಕೆ ಹೋಗಿತ್ತು ಅನಿಸುತ್ತದೆ. ಹಾಗೆನಿಸಿದರಲ್ಲಿ ಅವನದೇನೂ ತಪ್ಪಿಲ್ಲ. ನನ್ನ ಸ್ವಭಾವವೇ ಒಂದು ವಿಚಿತ್ರ, ಯಾವಾಗ ಯಾರು ಬೇಡವಾಗ್ತಾರೆ ಅನ್ನೋದು ನನಗೇ ಗೊತ್ತಿರೋಲ್ಲ. ಹೋಗಲಿ ಬಿಡಿ ಈಗ ಅವನು ನೆನಪಗಿದ್ದಾದರೂ ಯಾಕೆ?

ಹೀಗೆಯೇ ನನ್ನ ಕಿರಿಯ ಸಹೋದ್ಯೋಗಿಯ  ಜೊತೆ ಅದೂ ಇದೂ ಮಾತಾಡ್ತಾ ನಮ್ಮ NITK students co-op strores ಎದುರು ನಿಂತಿದ್ದೆ. ಆಗ ನಮ್ಮ ಹೊಸ ಕಟ್ಟಡದ ಯಾವುದೊ ಒಂದು ಅಂತಸ್ತಿನ ಕೋಣೆಯೊಂದರ ಫಾಲ್ ಸೀಲಿಂಗ್ ಗಳು ನನ್ನ್ನನ್ನು ಅಣಕಿಸಿದವು, ಹಾಗೆಯೇ ಅಲ್ಲಿಯೇ ಕೊಡಲಾಗಿದ್ದ ಹಾವಿನಂತಹ ಅರ್ಥಿಂಗ್ ಪಾಯಿಂಟ್ ನನ್ನನ್ನು ಅಶಾಂತಿ ಗೆ ದೂಡಿತು. ನಮ್ಮ ವಿಭಾಗದಲ್ಲಿ ನಾವೆಂದರೆ (ಕೆಲವೊಬ್ಬರು) ಒಂದು ಥರ ದಲಿತರ ಹಾಗೆ ತುಳಿತಕ್ಕೆ ಒಳಗಾಗಿರುವ ವರ್ಗ. ನಾವು ಏನನ್ನು ಕೇಳಿದರು ನಮ್ಮ ಮಾತಿಗೆ  ಕವಡೆ ಕಾಸಿನ ಕಿಮ್ಮತ್ತಿಲ್ಲ. ಆದರೆ ಕೆಲವೊಂದು ಪಾಳೆಗಾರರ ಪಳೆಯುಳಿಕೆಗಳು ಕೇಳಿದ್ದೆಲ್ಲ ದಕ್ಕಿಬಿಡುತ್ತದೆ. ಅವರಿಗೆ ಬೇಕಾಗಿದ್ದೆಲ್ಲವು ಅವ್ರಿಗೆ ಸಿಕ್ಕಿಬಿಡುತ್ತದೆ. ನಮಗೆ ಚಿಕ್ಕನಾಯಕನಹಳ್ಳಿ ಚಿಪ್ಪೇ ಗತಿ. ನಾವು ನಮ್ಮ ಪ್ರಯೋಗಲಯಕ್ಕೆಂದೇ ಪ್ರತ್ಯೇಕ ಏರ್ಥಿಂಗ್ ಪಾಯಿಂಟ್ ಕೇಳಿದಾಗ ನಿರಾಕರಿಸಿದರು. ಮುಂದುವರೆದು "ನಿಮ್ಮ ಕಟ್ಟಡದಲ್ಲಿ ಇರುವರಿಗೆಲ್ಲರಿಗೂ ಒಂದೇ ಏರ್ಥಿಂಗ್ ಕೊಟ್ಟಿದ್ದೇವೆ, ಅದಕ್ಕೆಂದೇ ಕಟ್ಟಡದ ಮೂಲೆ ಮೂಲೆ ಯಲ್ಲಿ ದಪ್ಪನೆಯ ತಾಮ್ರದ ಪಟ್ಟಿಯನ್ನೂ ಹಾಕಿದ್ದೇವೆ ನೀವು ಅದನ್ನೇ ಬಳಸಬೇಕು" ಎಂದು ಹೇಳಿದವರು ಕೆಲವೊಬ್ಬರಿಗೆ ಮಾತ್ರ ಪ್ರತ್ಯೇಕ 
ಏರ್ಥಿಂಗ್ ಅನ್ನು ಕೊಡುತ್ತಾರೆಂದರೆ ಬೇಜಾರಾಗುತ್ತದೆ. ಕೆಲವೊಬ್ಬರು ಗಣಕಯಂತ್ರ ಪ್ರಯೋಗಾಲಯಕ್ಕೆಂದು ಮೀಸಲಾಗಿಟ್ಟಿದ್ದ  ಕೋಣೆಯನ್ನು ಉಪಾಯವಾಗಿ ತಮಗೇ ಬೇಕು ಎಂದಾಗಲೂ ಯಾರೂ ಮಾತನಾಡಲಿಲ್ಲ. 

ನನಗೀಗ ದಲಿತ ವರ್ಗದವರು ಅನುಭವಿಸಿದ್ದ ಕಷ್ಟ ಕಾರ್ಪಣ್ಯಗಳು ಒಂದೊಂದಾಗಿ ಅರ್ಥವಾಗುತ್ತಲಿವೆ. ಅವರಿಗೂ ಹೀಗೆಯೇ ತುಳಿಯಲಾಗಿತ್ತು. ಒಂದು ಸಾರಿ ಹೀಗೆಯೇ ಮಾತನಾಡುತ್ತಿರುವಾಗ  (ನಮ್ಮ ವಿಭಾಗ ಹೊಸ ಕಟ್ಟಡಕ್ಕೆ  ವರ್ಗಾವಣೆಯಾಗುತ್ತಲ್ಲಿತ್ತು) ನಮ್ಮ ಗುರುಗಳಿಗೆ ನಮ್ಮಲ್ಲಿರುವ  UPS ಹಾಗೂ ಬ್ಯಾಟರಿಗಳನ್ನು ಹೊರಗಡೆ ಇಟ್ಟುಬಿಡೋಣ ಆಗ ನಮಗೆ ಸ್ಥಳದ ಉಳಿಯುತ್ತೆ ಎಂದಾಗ ಅವರು ಹೌಹಾರಿ ಅದೆಲ್ಲ ಆಗುವುದಿಲ್ಲವೆಂದೂ, ನಮ್ಮ ಮುಖ್ಯಸ್ಥರು ಕಟ್ಟಡದ ಸೌಂದರ್ಯಕ್ಕೆ ದಕ್ಕೆಬರುತ್ತದೆನ್ನುವರೆಂದೂ ಕಾರಣ ಕೊಟ್ಟರು. ಆದರೆ ಪಾಳೆಗಾರರು ತಮ್ಮ ಬ್ಯಾಟರಿ ಮತ್ತು UPS ಗಳನ್ನೂ ಹೊರಗಡೆ ಇಟ್ಟಾಗ ಏನೂ ಮಾತನಾಡದೆ ಹೋದರು. ಅದರ ಮುಂದುವರೆದ ಭಾಗವಾಗಿ ಬ್ಯಾಟರಿಗಳಿಂದ ಬರುವ ಕೆಟ್ಟ ಅನಿಲಗಳಿಂದ ರಕ್ಷಣೆಗೆಂದು ಅದಕೊಂದು ಹೊಸ ಕೋಣೆಯನ್ನು ರಚಿಸಲಾಯಿತು. ಇದಕ್ಕೂ  ನಮ್ಮ ಮುಖ್ಯಸ್ಥರ ಸಮ್ಮತಿ ಇತ್ತೆಂದು ಹೇಳಬೇಕಾಗಿಲ್ಲ. ಕೆಲವೊಂದು ಸಾರಿ ಅನ್ನಿಸುತ್ತೆ ನಮಗೆಲ್ಲ ಯಾಕೆ ಬೇಕು ಇದರ ಉಸಾಬರಿ ಆದ್ರೆ ಎಲ್ಲದಕ್ಕೋ ಒಂದು ತಾಳ್ಮೆ ಅನ್ನುವುದು ಇರುತ್ತಲ್ಲವೇ?

ಹಿಂದೊಮ್ಮೆ ಅಂದುಕೊಳ್ಳುತ್ತಿದ್ದೆವು (ಅವನು, ನಾನು ಹಾಗೂ ಮತ್ತಿತರರು), ಈ ಪಾಳೆಯಗಾರರು ಎಷ್ಟು ಮೆರೆಯಬಹುದೋ ಮೆರೆಯಲಿ.  ನಮ್ಮ ಸರದಿ ಬಂದಾಗ ಬೇಕಾದ ಉಪಕರಣಗಳು, ವಸ್ತುಗಳು ಹಾಗೂ ಇನ್ನಿತರ ಕೆಲಸಗಳನ್ನು ಮಾಡಬಹುದೆಂದು. ಆದರೆ ನೀರ ಮೇಲಿನ ಗುಳ್ಳೆಯ ಹಾಗೆ ಎಲ್ಲವೂ ಪಟ್ ಎಂದವು. ಅದೇನೋ ಕುಂತಿ ಮಕ್ಕಳಿಗೆ ವನವಾಸ ತಪ್ಪಿದ್ದಲ್ಲ ಅಂತಾನೋ ಅಥವ ಕುಂತಿ ಮಕ್ಕಳು ವನವಾಸ ಮುಗಿಸಿದರೂ ರಾಜ್ಯಭಾರ ಮಾಡೋ ಯೋಗ ಇಲ್ಲ ಅಂತಾನೋ ಅಂತಾರಲ್ಲ ಹಾಗಾಯ್ತು ನಮ್ಮ ಪರಿಸ್ಥಿತಿ.  

ಇದೆ ತರಹದ ವಿಷಯಗಳು ಪದೇ ಪದೇ ಮರುಕಳಿಸುತ್ತಿದ್ದರೆ ಎಂತವನನ್ನಾದರೂ ಅಧೀರನನ್ನಾಗಿ ಮಾಡಿಬಿಡುತ್ತವೆ. ಬಹುಶಃ ನನ್ನ ಗೆಳೆಯನಿಗೂ ಹಾಗೆ ಆಗಿರಬೇಕು. ಇಲ್ಲಿ ಐದು ವರುಷವಲ್ಲ, ಐವತ್ತು ವರುಷ ಕಾದರೂ ನಮಗೆ ಸಿಗುವುದು  ಬರೀ ನೋವು, ಅವಮಾನ, ಹಿಂಸೆ, ಜಿಗುಪ್ಸೆ ಎಂದೆನಿಸಿ ಅವನು ಕಠಿಣ ನಿರ್ಧಾರ ತೆಗೆದುಕೊಂಡಿರಬೇಕು. ಒಮ್ಮೆ ಅನಿಸುತ್ತದೆ ಅವನು ಮಾಡಿದ್ದು ಸರಿಯೆಂದು ಆದರೂ, ಇನ್ನೊಮ್ಮೆ ಅವ್ನು ತನ್ನ ನಿರ್ಧಾರವನ್ನು ಪರಿಶೀಲಿಸಬೇಕಿತ್ತು ಎಂದೂ ಎನಿಸುತ್ತೆ.

ಈ ಸಮಾಜವಾದ ಅದೂ ಇದೂ ಎಲ್ಲ ಬೊಗಳೆ. ಯಾವನಿಗೆ ಮತ್ತೊಬ್ಬನನ್ನು ತುಳಿಯುವ ಕಲೆ ಗೊತ್ತಿರುತ್ತೋ ಅವ್ನೆ ಇಲ್ಲಿ ರಾಜ.

ನನ್ನಲ್ಲಿರುವ ಚೈತನ್ಯವಲ್ಲ ಸತ್ತು ಹೋಗಿದೆಯೇನೂ ಎನಿಸುತ್ತೆ. ನನ್ನಲ್ಲೂ ಈಗೀಗ ಅಶಾಂತಿ ಹೊಗೆಯಾಡುತ್ತಿದೆ. ಛೆ.. ನಾ ಕಂಡ ನಂದನವನದ ಕನಸು ನನಸಾಗುವುದಿಲ್ಲವೇನೋ.

Saturday, December 3, 2011

ಆ ದಿನಗಳು

"ಬೆಳಿಗ್ಗೆ, ಚಂಬು ಕೈ ಉಸ್ಕೊಂದು ಬಿದ್ದಾಗಲೇ ಅಂದ್ಕೊಂಡೆ ಯಾರೋ ಬರ್ತಾರೆ ಅಂತಾ" -- ನಮ್ಮ ಚಿಕ್ಕಮ್ಮ ಯಾರ ಹತ್ರನೋ ಹೇಳುತ್ತಾ ಇರೋದನ್ನ ಅಂತ ಇದ್ರೆ ಅಲ್ಲೇ ಆಟ ಆಡ್ತಾ ಇದ್ದ ನಾವೆಲ್ಲಾ ಓಡಿ ಬಂದು ಯಾರು ಬಂದ್ರಮ್ಮ ಯಾರು ಬಂದ್ರಮ್ಮ ಅಂತ ಅವರನ್ನ ಮಾತಾಡೊಕೆ ಬಿಡದೆ ಕೂಗಿ ಕೂಗಿ, ಅಷ್ಟರಲ್ಲಿ ಬಂದವರು ನಮಗೆ ಕಾಣಿಸಿ ಒಯ್.. ಮಾಮ ಬಂದ್ರು, ಮಾಮ ಬಂದ್ರು ಅಂತ ಅವರ ಕೈ ಚೀಲ ಇಸ್ಕೊಂಡು ಮನೆ ಒಳಕ್ಕೆ ಹೋಗ್ತಿದ್ವಿ. ಆ ದಿನಗಳೇ ಚೆಂದ ಅಲ್ಲವ. ಒಳಗಡೆ ಹೋಗಿ ಮೊದಲು ನೋಡ್ತಾ ಇದ್ದಿದ್ದು ಅವರು ತಿನ್ನೋದಿಕ್ಕೆ ಏನು ತಂದಿದ್ದಾರೆ ಅಂತಾ. ಅಕಸ್ಮಾತ್ ಅವ್ರು ಏನೂ ತಂದಿಲ್ಲ ಅಂದ್ರೆ ಮುಖ ಇಳಿ ಬಿಟ್ಟುಕೊಂಡು ಹೊರಗಡೆ ಬರ್ತಾ ಇದ್ವಿ. ಅಷ್ಟರಲ್ಲಿ ತಿನ್ನೋದಿದ್ರೆ ಏನಾದರೂ ಕೊಡೊ, ಏನಾದರೂ ಕೊಡೊ ಅನ್ನೋ ನಮ್ಮ ಇತರೆ ಸ್ನೇಹಿತರು. ಕೊನೆಗೆ ಎಲ್ಲರಿಗೂ ತಿನ್ನೋದಿಕ್ಕೆ ಏನೂ ಸಿಕ್ಕಿಲ್ಲವಲ್ಲ ಅಂತಾ ಬೇಜಾರಾಗಿ, ಆ ಬೇಜಾರು ಸಿಟ್ಟಾಗಿ ಪರಿವರ್ತನೆಯಾಗಿ ಮಾಮ ನ ಮೇಲೆ ಒಂದು ಹಾಡನ್ನೇ ಹೇಳೋದಿಕ್ಕೆ ಶುರು ಮಾಡ್ತಾ ಇದ್ವಿ. ಕಾಗಿ ಕಾಗಿ ಕವ್ವಾ.. ಯಾರು ಬಂದಾರವ್ವಾ?.. ಮಾವ ಬಂದಾನವ್ವ.. ಏನ್ ತಂದನವ್ವ.. ಹ೦ಡೆವನಂತ ---- ಬಿಟ್ಕೊಂಡು ಹಂಗೆ ಬಂದನವ್ವ... ಕೊನೆಗೆ ಜೋರಾಗಿ ನಗ್ತಾ ಇದ್ವಿ.. ಹೀಗೆ ನಗ್ತಾ ನಗ್ತಾ ಹಾಡ್ತಾ ಆಗಿರೋ ಬೇಸರ ಎಲ್ಲ ಕಳದೆ ಹೋಗ್ತಿತ್ತು...

ಎಲ್ಲಿ ಹೋದವು ಆ ದಿನಗಳು.. ಮನೆಗೆ ಯಾರದ್ರೂ ಬಂದ್ರು ಅಂದರೆ ಅದನ್ನು ಯಾವ ರೀತಿ ಖುಷಿಯಿಂದ ಹೇಳಿಕೊಳ್ಳುತ ಇದ್ರು ನಮ್ಮ ಜನ. ಅದರಲ್ಲೂ ನಮ್ಮ ಅಜ್ಜಿಗೆ ಇದ್ದಿದ್ದು ದೊಡ್ಡ ಕುಟುಂಬ ಹಾಗಾಗಿ ದಿನಾ ಯಾರದ್ರೂ ಬರ್ತಾನೆ ಇರುತ್ತಾ ಇದ್ರು . ನಮಗೆ ದಿವ್ಸಾ ಏನಾದರೂ ತಿನ್ನೋಕೆ ಸಿಕ್ತಾ ಇತ್ತು. ಆಮೇಲೆ ದಿನವೂ ನಮಗೆ ಹೊಸ ಹೊಸ ಸ್ನೇಹಿತರು ಸಿಕ್ತ ಇದ್ರು. ವಾವ್ ಏನ್ ಚೆನ್ನಾಗಿದ್ವು ಅಲ್ವ ಆ ದಿನಗಳು?

Tuesday, November 29, 2011

ಅಭಿಮಾನ ಶೂನ್ಯತೆ

ನಮ್ಮ ಜನ ಯಾವಾಗ ಸರಿ ಹೋಗ್ತಾರೋ ಅನಿಸಿಬಿಟ್ಟಿದೆ. ನಮ್ಮ ದೇಶವನ್ನು, ದೇಶದ ಜನರನ್ನು ಗಣನೆಗೆ ತಗೆದುಕೊಂಡರೆ, ನಮ್ಮನ್ನು ಅಭಿಮಾನ ಶೂನ್ಯತೆ ಯಲ್ಲಿ ಮೀರಿಸುವವರು ಪ್ರಪಂಚದಲ್ಲಿ ಎಲ್ಲಿಯೂ ಸಿಗರು. ಛೆ! ಏನಾಗಿದೆ ನಮಗೆ ನಮ್ಮ ಭಾಷೆ, ನಮ್ಮ ನೆಲ ಅನ್ನೋ ಚೂರು ಅಭಿಮಾನವೂ ಇಲ್ಲದೆ ಹೋಯಿತೆ? ಈ ದಿನಗಳಲ್ಲಿ ಪರಭಾಷೆಯಲ್ಲಿ ಮಾತನಾಡೋದೇ ದೊಡ್ಡಸ್ತಿಕೆಯ ಲಕ್ಷಣ. ಇದಕ್ಕೆ ಯಾರೂ ಹೊರತಾಗಿಲ್ಲ. ನಮ್ಮ ಕ್ರೀಡಾ/ಚಲನಚಿತ್ರ/ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಗಳಿಸಿದವರು ಅಪ್ಪಿ ತಪ್ಪಿಯೂ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲ. ಉದಾಹರಣೆಗೆ ನಮ್ಮ ಯಾವುದೇ ಚಿತ್ರ ತಾರೆಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲ. ಆದರೆ ಚಲನಚಿತ್ರಗಳನ್ನು ಮಾತ್ರ ಹಿಂದಿ/ಕನ್ನಡ ದಲ್ಲಿ ಮಾಡ್ತಾರೆ. ಎಲ್ಲೋ ಕೆಲವೊಬ್ಬರು ಇದಕ್ಕೆ ಹೊರತಾಗಿರಬಹುದು (ತಮಿಳು-ಮಲೆಯಾಳಂ ಜನ). ತಮ್ಮನ್ನು ಅನುಕರಿಸೋ ಸಾವಿರಾರು ಜನ ಇರ್ತಾರೆ ಅನ್ನೋ ಪರಿಜ್ಞಾನ ಇರೋಲ್ಲ ಅವರಿಗೆ.

ಇನ್ನು ನಮ್ಮ ಕನ್ನಡಿಗರ ಕತೆ ಹೇಳೋದೇ ಬೇಡ. ತಮ್ಮ ನಾಡು-ನುಡಿಯ ಬಗ್ಗೆ ತೀರ ಕಡಿಮೆ ಅಭಿಮಾನ ಇರುವವರ ಸ್ಪರ್ಧೆ ಮಾಡಿದರೆ ನಾವೇ ಮೊದಲು ಬರ್ತಿವಿ. ದೊಡ್ಡ ದೊಡ್ಡ ಜನಗಳನ್ನು ಬಿಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಷ್ಟೋ ಜನ ಹೀಗಿರ್ತರೆ. ಮೊನ್ನೆ ಏನಾಯಿತು ಅಂದರೆ ನನ್ನ ಒಬ್ಬ ಸ್ನೇಹಿತ ಪರಸ್ಥಳಕ್ಕೆ ಹೋಗಿದ್ದ. ವಾಪಾಸ್ ಬಂದಾಗ ಹೇಳಿದ ಅದ್ಯಾವುದೋ ತಮಿಳು ಹಾಡು ಅವನು ಹೋದ ಊರಲ್ಲಿ, ಅಷ್ಟೇ ಅಲ್ಲ ಇಡೀ ದೇಶದಲ್ಲೇ ಜನಪ್ರಿಯ ಆಗಿ ಹೋಗಿದೆ. ಅಂತರ್ಜಾಲದಲ್ಲಿ ಲಕ್ಷಾನುಗಟ್ಟಲೆ ಜನ ಇಷ್ಟ ಪಟ್ಟಿದಾರೆ ಅದೂ ಇದೂ ಏನೇನೋ ಹೇಳಿದ. ನಾ ಕೇಳಿದೆ ಅದ್ರಲ್ಲಿ ಅಂತದ್ದು ಏನಪ್ಪಾ ಇದೆ ಅದರಲ್ಲಿ? ಅವನು ಹೇಳಿದ, ಅದು ತಮಿಳು ಹಾಗು ಇಂಗ್ಲಿಷ್ ಮಿಶ್ರಣ ಮಾಡಿ ಬರೆದಿರೋ ಹಾಡು, ತುಂಬಾ ಚೆನ್ನಾಗಿದೆ, ತುಂಬಾ ಚೆನ್ನಾಗಿ ಬರೆದಿದಾನೆ, ಹಾಡಿದ್ದಾನೆ ಅಂದ. ನಾನು ಕುತೂಹಲಕ್ಕಾಗಿ ಕೇಳಿದಾಗ ಅದರೆಲ್ಲೇನೂ ಹೊಸದಿಲ್ಲ ಅನಿಸ್ತು. ನಮ್ಮ ಯೋಗರಾಜ ಭಟ್ಟರ ಪ್ರತೀ ಚಲನಚಿತ್ರದಲ್ಲೂ ಅಂತಹ ಒಂದೆರಡು ಹಾಡು ಇರ್ತವೆ. ಅಲ್ಲಾರಿ ನಮ್ಮವರು ಮಾಡಿದ್ರೆ ಕೇಳೋಲ್ಲ, ಅದೇ ಬೇರೆಯವರು ಮಾಡಿದ್ರೆ ಹೊಗಳುತೀವಲ್ಲಾ? ಇದು ನ್ಯಾಯನಾ?

ಹೀಗೆ ಬರಿತಾ ಹೋದರೆ ಇಡೀ ಜೀವನ ಸಾಲದು. ಹೋಗ್ಲಿ ಬಿಡಿ!!

Monday, November 7, 2011

'ಇ ಜ್ಞಾನ' -ವಿಜ್ಞಾನ ಸಂವಹನ ಪತ್ರಿಕೆ

'ಇ ಜ್ಞಾನ' -ವಿಜ್ಞಾನ ಸಂವಹನ ಪತ್ರಿಕೆ. ಓದಲು ಕ್ಲಿಕ್ಕಿಸಿ ಅಥವ ಜಾಲತಾಣದ ವಿಳಾಸವನ್ನು ನಕಲಿಸಿ ನಿಮ್ಮ ವೆಬ್ ಬ್ರೌಸೆರ್ ನ ವಿಳಾಸಕ್ಕೆ ಅಂಟಿಸಿ. ನಿಜಕ್ಕೂ ಒಳ್ಳೆಯ ಪ್ರಯತ್ನ.

http://issuu.com/srimysore/docs/vijnanasamvahana/22